ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಸಂಡೂರು ಭಾಗದಲ್ಲಿ ನೈಸರ್ಗಿಕವಾಗಿ ಬೆಳೆದ ಕಾಡಿನಲ್ಲಿ ಗಣಿಗಾರಿಕೆ ಆರಂಭಿಸಿರುವುದು ಖಂಡನೀಯವಾಗಿದ್ದು, ಕೂಡಲೇ ಗಣಿಗಾರಿಕೆಗೆ ನಿಷೇಧ ಹೇರಿ, ಆಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಜನಸಂಗ್ರಾಮ ಪರಿಷರತ್ (ಜೆಎಸ್‌ಪಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಉತ್ತರ ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಸಂಡೂರು ಉನ್ನತ ಶ್ರೇಣಿಯ ಬೆಟ್ಟದಿಂದ ಸುತ್ತಲಿನ ಜಿಲ್ಲೆಗಳಿಗೆ ಮಳೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರಾಣವಾಯುವನ್ನು ಉತ್ಪಾದಿಸುವ ‘ಆಕ್ಸಿಜನ್ ಬ್ಯಾಂಕ್’ ಎಂದೆ ಖ್ಯಾತಿ ಪಡೆದಿದ್ದು, 38 ಗಣಿಗಳಿಂದ 41ಮಿಲಿಯನ್ ಅದಿರು ಉತ್ಪಾದನೆಯಾಗುತ್ತಿದೆ. ಇಷ್ಟು ಪ್ರಮಾಣದ ಅದಿರು ಉತ್ಪಾದನೆ ಸಾಗಣಿಕೆಯಿಂದಾಗಿ ಪರಿಸರ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಅಪಾಯ ಉಂಟಾಗಿದೆ ಎಂದು ಪ್ರತಿಪಾದಿಸಿದರು.ಅತಿವೃಷ್ಠಿ–ಅನಾವೃಷ್ಠಿಯಂತಹ ಪ್ರಕೃತಿಕ ವಿಕೋಪ ಸಂಭವಿಸುವುದರಿಂದ ಅಂತರ್ಜಲ ಕುಸಿತ, ಕುಡಿವ ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ. ಈ ವರ್ಷ ರಾಜ್ಯವು ಬಿಸಿಲಿನಿಂದ ಕೆಂಗೆಟ್ಟಿದ್ದು ಅರಣ್ಯ ನಾಶದಿಂದಲೇ ಎಂದು ಆರೋಪಿಸಿದರು.
ಸಂವಿಧಾನದ 51–ಎ(ಜಿ)ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಭಾರತೀಯರಾದ ನಾವು ನಮ್ಮ ಹಕ್ಕು ಚಲಾಯಿಸುವುದರ ಮೂಲಕ ನಾಡಿನ ನೆಲ, ಜಲ, ಪರಿಸರ ಹಾಗೂ ಖನಿಜ ಸಂಪನ್ಮೂಲವನ್ನು ಮುಂದಿನ ಪಿಳಿಗೆಗೆ ರವಾನಿಸಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಮಹಾತ್ಮಗಾಂಧಿಯವರು 1930ರಲ್ಲಿ ಸಂಡೂರಿಗೆ ಭೇಟಿ ನೀಡಿ ಬೆಟ್ಟ ಗುಡ್ಡಗಳಲ್ಲಿನ ಹಚ್ಚ ಹಸಿರಿನ ಸೊಬಗನ್ನು ಆನಂದಿಸಿ ‘ಸೀ ಸಂಡೂರ್ ಇನ್ ಸೆಪ್ಟಂಬರ್’ ಎಂದು ಬಣ್ಣಿಸಿದ್ದರು. ಸಂಡೂರು ತಾಲೂಕಿನ ರಾಮನಮಲೈ ಮತ್ತು ಸ್ವಾಮಿ ಮಲೈ (ಕುಮಾರಸ್ವಾಮಿ ಬೆಟ್ಟ) ಇದೆ. ಚಾಲುಕ್ಯ, ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಸಂರಕ್ಷಿತ ಐತಿಹಾಸಿಕ ಪೌರಾಣಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಪಾರ್ವತಿ ದೇಗುಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾವಿರಾರು ಔಷಧೀಯ ಗಿಡಮೂಲಿಕೆಗಳು, ಶ್ರೀಗಂಧ, ರಕ್ತ ಚಂದನ, ತೇಗ, ಬೀಟೆ ಹಾಗೂ ವಿವಿಧ ಪ್ರಭೇದದ ವೈವಿಧ್ಯಮಯ ಮರಗಳು ಇವೆ. ಅಪರೂಪದ ಪಕ್ಷಿ ಸಂಕುಲ ವಾಸಸ್ಥಾನವಾಗಿದೆ. ಇಂತಹ ಪರಿಸರ ನಾಶಕ್ಕೆ ಮುಂದಾಗಿರುವುದನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲವೆಂದು ಕಿಡಿಕಾರಿದರು.
ಸಂಡೂರಿನ ಅರಣ್ಯದಲ್ಲಿ ಈಗಾಗಲೇ ಕೆಐಒಸಿಎಲ್ ಗೆ ನೀಡಿರುವ ಅನುಮತಿ ರದ್ದುಗೊಳಿಸುವ ಜೊತೆಗೆ ಬೆಟ್ಟದ ಗರ್ಭದಲ್ಲಿರುವ ಅದಿರಿನ ನಿಕ್ಷೇಪ ಶೋಧನೆ ಮಾಡುವುದು ಹಾಗೂ ಅರಣ್ಯ ಕಡಿದು ಗಣಿಗಾರಿಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜೆಎಸ್‌ಪಿ ಜಿಲ್ಲಾಧ್ಯಕ್ಷ ವೀರಣ್ಣ ಭಂಡಾರಿ, ಕಾರ್ಯದರ್ಶಿ ಖಾಜಾ ಅಸ್ಲಂ ಅಹ್ಮದ್, ಜಾನ್ ವೆಸ್ಲಿ ಕಾತರಕಿ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ ಸೇರಿ ಇತರರು ಇದ್ದರು.