ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣವು ಜಗತ್ತನ್ನು ಬದಲಾಯಿಸಬಲ್ಲ ಅತ್ಯಂತ ಪ್ರಬಲವಾದ ಅಸ್ತ್ರವಾಗಿದೆ. ಜ್ಞಾನ ಮತ್ತು ಕೌಶಲ್ಯ ಅತ್ಯಮೂಲ್ಯವಾದ ಆಸ್ತಿ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ಆಯೋಜಿಸಿದ್ದ ಶಿಕ್ಷಕರ ಸಾಮರ್ಥ್ಯ ಸಂವರ್ಧನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವು ಅಡೆತಡೆಗಳನ್ನು ಕಿತ್ತೊಗೆಯುವ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ಉತ್ತೇಜಿಸುತ್ತದೆ. ಶಿಕ್ಷಣವು ಕೇವಲ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯಗಳ ಸ್ವಾಧೀನವಲ್ಲ, ಪ್ರತಿಯೊಬ್ಬ ಕಲಿಯುವವರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
21ನೇ ಶತಮಾನದ ಬೋಧನಾ ಸಾಧನಗಳಾದ ಮೈಕ್ರೋಟೀಚಿಂಗ್, ಡಿಜಿಟಲ್ ಲರ್ನಿಂಗ್, ಡೀಪ್ ಲರ್ನಿಂಗ್ ಇವುಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತೆ ಅವರು ಶಿಕ್ಷಕರಿಗೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಮಾತನಾಡಿ, ಶಿಕ್ಷಕರಲ್ಲಿ ಸಾಮರ್ಥ್ಯವೃದ್ಧಿ ನಿರಂತರ ಪ್ರಕ್ರಿಯೆಯಾಗಬೇಕು. ಜ್ಞಾನವನ್ನು ಅಳೆಯಲಾಗುವುದಿಲ್ಲ. ಶಿಕ್ಷಕ ಆಧುನಿಕ ತಂತ್ರಜ್ಞಾನವನ್ನು ಅರಿಯುವ ಮೂಲಕ ತನ್ನ ಜ್ಞಾನಾರ್ಜನೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಸಾಧ್ಯ. ಅತ್ಯುತ್ತಮ ಸಂವಹನ, ಪರಿಣಾಮಕಾರಿ ಕೌಶಲ್ಯ, ಬೋಧನೆಯ ಕ್ಷೇತ್ರದಲ್ಲಿ ಆಳವಾದ ಜ್ಞಾನ ಶಿಕ್ಷಕನಿಗೆ ಅತ್ಯವಶ್ಯಕ ಎಂದರು.
ನಂತರ ನಡೆದ ಮೊದಲ ಗೋಷ್ಠಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಡಿ.ಎಲ್. ಶಿವಪ್ರಸಾದ್, ಡಿ. ಸ್ವರೂಪ್ ಮತ್ತು ಡಿ. ನಂದಿನಿ ಅವರು, ಕಲೆ, ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಪರಿಣಾಮಕಾರಿ ಬೋಧನೆ ವಿಷಯ ಕುರಿತು ವಿಚಾರ ಮಂಡಿಸಿದರು. 2ನೇ ಗೋಷ್ಠಿಯಲ್ಲಿ ರಿಸರ್ಚ್ ಎಥಿಕ್ಸ್ ಮತ್ತು ಪ್ರಿವೆನ್ಷನ್ ವಿಷಯ ಕುರಿತು ಡಾ.ಸಿ.ಪಿ. ರಾಮಶೇಷ್, 3ನೇ ಗೋಷ್ಠಿಯಲ್ಲಿ ಒತ್ತಡ ಮತ್ತು ಸ್ಥಿತಿಸ್ಥಾಪಕತ್ವ ವಿಷಯ ಕುರಿತಂತೆ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಜೆ. ಶಿವಾನಂದ ಮನೋಹರ್ ಉಪನ್ಯಾಸ ನೀಡಿದರು.ಕಾರ್ಯಾಗಾರದ ವರದಿಯನ್ನು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಲಲಿತಾಂಬ ಮಂಡಿಸಿದರು. ಸಮಾರೋಪ ಸಮಾರಂಭದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಪೂರ್ಣಿಮಾ, ಶೈಕ್ಷಣಿಕ ಡೀನ್ ಡಾ. ರೇಚಣ್ಣ ಇದ್ದರು. ಡಾ.ಎಸ್. ಚೈತ್ರಾ ಪ್ರಾರ್ಥಿಸಿದರು. ಆರ್.ಎಸ್. ಕುಮಾರ್ ಸ್ವಾಗತಿಸಿದರು. ಎನ್.ಎಂ. ಕೃಷ್ಣಪ್ಪ ವಂದಿಸಿದರು. ಜೆ. ಪುಷ್ಪಲತಾ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))