ಸಾರಾಂಶ
ಅವ್ಯವಸ್ಥೆ, ಮಕ್ಕಳ ಸಮಸ್ಯೆ ಕುರಿತು ಕಾನೂನು ಪ್ರಾಧಿಕಾರಕ್ಕೆ ವರದಿ । ನ್ಯಾಯಾಧೀಶರ ಭೇಟಿ ವೇಳೆ ಅನೇಕ ಮಕ್ಕಳು ಗೈರು
ಕನ್ನಡಪ್ರಭ ವಾರ್ತೆ ಚಿಂಚೋಳಿತಾಲೂಕಿನ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳಿಗೆ ಚಿಂಚೋಳಿ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ದತ್ತಕುಮಾರ ಜವಳಕರ್ ಭೇಟಿ ನೀಡಿ ವಸತಿ ನಿಲಯಗಳ ಅವ್ಯವಸ್ಥೆ ಕುರಿತು ಇಲಾಖೆಯ ಜಿಲ್ಲಾ ಕಾನೂನು ಮುಖ್ಯಸ್ಥರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.
ಡಿ.೧೩ರಂದು ಚಂದಾಪೂರ ನಗರದಲ್ಲಿ ಇರುವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ೫೦ ವಿದ್ಯಾರ್ಥಿನಿಯರ ಪೈಕಿ ಕೇವಲ ೨೫ ವಿದ್ಯಾರ್ಥಿನಿಯರು ಹಾಜರಿದ್ದರು. ಕಾಲೇಜು ಬಾಲಕಿಯರ ವಸತಿ ನಿಲಯದಲ್ಲಿ ೩೦ ಮಕ್ಕಳು ಹಾಜರಿದ್ದರು. ಎರಡು ವಸತಿ ನಿಲಯಗಳಲ್ಲಿ ಮೇಲ್ವಿಚಾರಕರು ಹಾಗೂ ಕಾವಲುಗಾರರು ಇರಲಿಲ್ಲ.ಚಂದಾಪೂರ ಕಾಲೇಜು ವಸತಿ ನಿಲಯದಲ್ಲಿ ೭೦ ವಿದ್ಯಾರ್ಥಿಗಳ ಪೈಕಿ ೧೬ ವಿದ್ಯಾರ್ಥಿಗಳಿದ್ದರು. ಮನೆಗೆ ಹೋಗಿದ್ದಾರೆ ಎಂದು ತಿಳಿಯಿತು. ೧೬ ಮಕ್ಕಳಿಗೆ ೩ಕೆಜಿ ಅಕ್ಕಿ (ಅನ್ನ) ೨ಕೆಜಿ ಗೋಧಿ, ಉಪಹಾರಕ್ಕಾಗಿ ೨ಕೆಜಿ ಖರ್ಚು ಮಾಡುತ್ತಿದ್ದಾರೆ. ೧೬ ಮಕ್ಕಳಿಗೆ ಅಡುಗೆ ಮಾಡಲು ನಾಲ್ವರು ಸಿಬ್ಬಂದಿ ಇರುವುದನ್ನು ಕಂಡು ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸುಲೇಪೇಟ ವಸತಿ ನಿಲಯದಲ್ಲಿ ೧೦೦ಮಕ್ಕಳ (೫೦+೫೦) ಪೈಕಿ ಕೇವಲ ೧೫ ಮಕ್ಕಳಿದ್ದರು. ಸರ್ಕಾರದ ಬೊಕ್ಕಸದಿಂದ ಹಣ ಪೋಲಾಗುತ್ತಿದೆ. ಹೀಗಾಗಿ ವಸತಿ ನಿಲಯಗಳ ಮಕ್ಕಳು ಒಂದೇ ಸೂರಿನಡಿ ಇರಿಸಿ ಊಟ ಉಣಬಡಿಸಬೇಕು. ವಸತಿ ನಿಲಯ ನಡೆಸಿದರೆ ಸರ್ಕಾರದ ಪೋಲಾಗುವ ಹಣ ಉಳಿಸಬಹುದಾಗಿದೆ ಎಂದು ನ್ಯಾಯಾಧೀಶರು ಕಾನೂನು ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಸುಲೇಪೇಟ ಗ್ರಾಮದಲ್ಲಿ ಇರುವ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜ.೧೦ರಂದು ಸಂಜೆ ೬ಕ್ಕೆ ಭೇಟಿ ನೀಡಿದಾಗ ವಾರ್ಡನ ಇರಲಿಲ್ಲ. ವಸತಿ ನಿಲಯಕ್ಕೆ ಸುಣ್ಣ ಬಣ್ಣ ಮಾಡಿರುವುದಿಲ್ಲ. ೫೦ ಮಕ್ಕಳಲ್ಲಿ ೮ ಮಕ್ಕಳು ಮಾತ್ರ ಹಾಜರಿದ್ದರು. ಅಡುಗೆ ಸಿಬ್ಬಂದಿ೨೦ ಜನರಿಗೆ ಆಗುವಷ್ಟು ಅಡುಗೆ ಸಿದ್ದಪಡಿಸಿದ್ದರು. ನಿಲಯದ ಕಿಟಿಕಿಗಳಿಗೆ ಗಾಜು ಇರಲಿಲ್ಲ. ಮಕ್ಕಳಿಗೆ ಮೇನು ಚಾರ್ಟ ಪ್ರಕಾರ ಊಟ ನೀಡದಿರುವುದು. ಕಾವಲುಗಾರ ಮಕ್ಕಳಿಗೆ ಹಣ ಕೇಳುವುದು ಹಾಗೂ ಹೆದರಿಸುವುದು ಮಾಡುತ್ತಾರೆ ಎಂದು ವರದಿಯಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಸ್ವಚ್ಚತೆ ಇರಲಿಲ್ಲ, ಅಗತ್ಯ ವಸ್ತುಗಳ ಕಿಟ ನೀಡಿಲ್ಲ. ರಟಕಲ್ ವಸತಿ ನಿಲಯದಲ್ಲಿ ಕಾವಲುಗಾರನೇ ಸಂಸಾರ ಸಮೇತವಾಗಿ ವಾಸವಾಗಿದ್ದಾನೆ. ವಸತಿ ನಿಲಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಇದ್ದರು.ಕಾವಲುಗಾರಳು ಇದ್ದರು. ಶುದ್ದ ನೀರಿನ ಸೌಲಭ್ಯ ಇರಲಿಲ್ಲ ಎಂದು ಚಿಂಚೋಳಿ ನ್ಯಾಯಾಲಯ ನ್ಯಾಯಾಧೀಶ ದತ್ತಕುಮಾರ ಜವಳಕರ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಚಿತ್ರಚಿಂಚೋಳಿಯ ಸುಲೇಪೇಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯಕ್ಕೆ ನ್ಯಾಯಾಧೀಶ ದತ್ತಕುಮಾರ ಜವಳಕರ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸಿದರು.