500 ವರ್ಷಗಳ ಹೋರಾಟದ ಫಲದಿಂದ ನ್ಯಾಯ ದೊರೆತಿದೆ: ಮಂಗೇಶ ಭೇಂಡೆ

| Published : Feb 13 2024, 01:45 AM IST

500 ವರ್ಷಗಳ ಹೋರಾಟದ ಫಲದಿಂದ ನ್ಯಾಯ ದೊರೆತಿದೆ: ಮಂಗೇಶ ಭೇಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 500 ವರ್ಷಗಳ ನಿರಂತರ ಹೋರಾಟದ ಫಲವಾಗಿ ಈಗ ನಮಗೆ ನ್ಯಾಯ ದೊರೆತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಹುಬ್ಬಳ್ಳಿ: ಶ್ರೀರಾಮ ಮಂದಿರ ಪ್ರತಿಷ್ಠಾಪನೆಗಾಗಿ ಕಳೆದ 500 ವರ್ಷಗಳ ನಿರಂತರ ಹೋರಾಟದ ಫಲವಾಗಿ ಈಗ ನಮಗೆ ನ್ಯಾಯ ದೊರೆತಿದ್ದು, ಇದಕ್ಕಾಗಿ ಲಕ್ಷಾಂತರ ಕರಸೇವಕರು ಪ್ರಾಣಾರ್ಪಣೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಸ್ಥಳೀಯ ಶಿವಶಂಕರ ಕಾಲನಿಯಲ್ಲಿ ಸಂಜೀವಿನಿ ಶ್ರೀ ಮಾರುತಿ ದೇವಾಲಯದ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶ್ರೀರಾಮ ಮಂದಿರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಏಕೆ ಈ ಜಗತ್ತು ಸಂಭ್ರಮದಿಂದ ಆಚರಿಸಿತು. 500 ವರ್ಷಗಳ ಹಿಂದೆ ದರೋಡೆಕೋರನಾಗಿ ಬಂದ ಬಾಬರ್‌ ಕೋಟ್ಯಂತರ ಜನರ ಶ್ರದ್ಧಾ ಕೇಂದ್ರದಲ್ಲಿದ್ದ ದೇವಸ್ಥಾನವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಲು ಪ್ರಯತ್ನಿಸಿದನು. ಆದರೆ, ಅದು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಹಿಂದೂ ಸಮಾಜ ನಡೆಸಿದ ನಿರಂತರ ಹೋರಾಟ. ಈ ಜಾಗಕ್ಕಾಗಿಯೇ 76 ಯುದ್ದಗಳು ನಡೆದಿವೆ. 2 ಲಕ್ಷಕ್ಕೂ ಅಧಿಕ ಹಿಂದೂಗಳ ಬಲಿದಾನವಾಗಿದೆ.

ಇಷ್ಟೊಂದು ದೀರ್ಘಕಾಲದ ಸಂಘರ್ಷದ ನಂತರ 1984ರ ನಂತರ ಯುದ್ಧ ನಡೆಯಲಿಲ್ಲ. ಆದರೆ, ಹೋರಾಟ, ಚಳವಳಿ ಮುಂದುವರಿಯಿತು. ದೇಶದ ಸಾಧು-ಸಂತರು ಕರೆಕೊಟ್ಟ ವೇಳೆ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಕರಸೇವಕರು ಅಯೋಧ್ಯೆಗೆ ತೆರಳಿದರು. ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್‌ ಯಾದವ್‌ ಅವರು ಅಂದಿನ ಬಾಬರಿ ಢಾಚಾದ ಸುತ್ತಲೂ 7 ಸುತ್ತಿನ ಮುಳ್ಳಿನ ಬೇಲಿಯ ಗೋಡೆ ನಿರ್ಮಿಸಿದ್ದರು. ಉತ್ತರ ಪ್ರದೇಶಕ್ಕೆ ಒಳಗಡೆ ಕರಸೇವಕರು ಪ್ರವೇಶಿಸದಂತೆ ಸೂಕ್ತ ಬಂದೋಬಸ್ತ್‌ ಮಾಡಿದ್ದರು.

ಅಂದು ನಿಶ್ಚಯವಾಗಿದ್ದ ಕರಸೇವೆಯ ಮುನ್ನಾದಿನ ಪತ್ರಕರ್ತರು ಅಂದಿನ ಪ್ರತಿಪಕ್ಷ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ನಾಳೆಯ ಕರಸೇವೆ ಜರುಗಲಿದೆಯೇ ಎಂದು ಪ್ರಶ್ನಿಸಿದ್ದರು, ಅದಕ್ಕೆ ವಾಜಪೇಯಿ ಅವರು ನೋಡ್ತಾ ಇರಿ ನಾಳೆ ಚಮತ್ಕಾರವೇ ನಡೆಯಲಿದೆ ಎಂದು ಹೇಳಿದ್ದರು. ನಿಶ್ಚಿತ ಸಮಯದಲ್ಲಿ ಅಶೋಕ ಸಿಂಘಾಲ್‌ ನೇತೃತ್ವದಲ್ಲಿ 25 ಸಾವಿರ ಕರಸೇವಕರು ಬೀದಿಗೆ ಬಂದಿದ್ದರು. ಅದನ್ನು ಸಹಿಸಿಕೊಳ್ಳದ ಅಂದಿನ ಮುಖ್ಯಮಂತ್ರಿಗಳು ಗೋಲಿಬಾರ್‌ಗೆ ಕರೆ ನೀಡಿದರು. ಅದರಲ್ಲಿ ನೂರಾರು ಕರಸೇವಕರು ಮೃತಪಟ್ಟರು. ಸತ್ತವರ ಕಾಲಿಗೆ ಮರಳಿನ ಚೀಲ ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು.

ಈ ರೀತಿಯ ಅತ್ಯಾಚಾರ ಮಾಡಿದರೂ 1992ರಲ್ಲಿ ದೇಶದ ಸಂತರು ಮತ್ತೆ ಕರಸೇವಕರಿಗೆ ಕರೆ ಕೊಟ್ಟಾಗ 4 ಲಕ್ಷಕ್ಕೂ ಅಧಿಕ ಜನರು ಹೋಗಿ ಅಲ್ಲಿನ ಕಳಂಕಿತ ಢಾಚಾವನ್ನು (ಮಸೀದಿ) ನೆಲಸಮಗೊಳಿಸದರು. ಆದರೂ ನಮಗೆ ನ್ಯಾಯ ಸಿಗಲು 30 ವರ್ಷ ಬೇಕಾಯಿತು. ಕೊನೆಗೆ ಸುಪ್ರಿಂಕೋರ್ಟ್‌ ಇದು ಶ್ರೀರಾಮನ ಜನ್ಮಸ್ಥಾನ. ಇದು ಹಿಂದೂಗಳಿಗೆ ಸೇರಿದ ಜಾಗ ಎಂದು ತೀರ್ಪು ನೀಡಿತು.

ಇಡೀ ಜಗತ್ತೇ ಈ ವರ್ಷ ಒಂದು ವಿಶೇಷ ಸಂಭ್ರಮ ಆಚರಿಸುತ್ತಿದೆ. 500 ವರ್ಷಗಳ ಕಳಂಕ ತೊಳೆದುಕೊಡು ದೇಶದ ಸ್ವಾಭಿಮಾನ ಸಂಕೇತವಾಗಿ ಕಳೆದ 22ರಂದು ಬಾಲಕ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಭಕ್ತ ಹನುಮಂತನ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿರುವುದು ಉತ್ತಮ ಕಾರ್ಯ. ಮುಂಬರುವ ಪೀಳಿಗೆ ಈ ಮಂದಿರದ ಜೀರ್ಣೋದ್ಧಾರ ಯಾವಾಗ ಆಯಿತು ಎಂದು ಕೇಳಿದರೆ ರಾಮ ಮಂದಿರದ ಪ್ರತಿಷ್ಠಾಪನೆಯ ವೇಳೆಯೇ ಈ ಮಂದಿರದ ಪ್ರತಿಷ್ಠಾಪನೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಸ್ವರ್ಣ ಗ್ರುಪ್‌ ಆಪ್‌ ಕಂಪನಿಯ ವಿ.ಎಸ್.ವಿ. ಪ್ರಸಾದ, ಧರ್ಮರಾಜ ಪೂಜಾರ, ಮಂದಿರದ ಅಧ್ಯಕ್ಷ ಗುರುನಾಥ ಪೂಜಾರ, ಗಣೇಶ ಪೂಜಾರ ಸೇರಿದಂತೆ ಹಲವರಿದ್ದರು.