ನ್ಯಾಯ ವ್ಯವಸ್ಥೆಯು ಕೇವಲ ನ್ಯಾಯಾಲಯಗಳು ಮತ್ತು ವಕೀಲರಿಗೆ ಮಾತ್ರ ಸೀಮಿತವಾಗಿರಬಾರದು. ನ್ಯಾಯವು ಗ್ರಾಮೀಣ ಪ್ರದೇಶಗಳು ಮತ್ತು ತಾಂಡಾಗಳಲ್ಲಿರುವ ಸಾಮಾನ್ಯ ಜನರನ್ನು ತಲುಪಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನು ಸಿವರಾಮನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನ್ಯಾಯ ವ್ಯವಸ್ಥೆಯು ಕೇವಲ ನ್ಯಾಯಾಲಯಗಳು ಮತ್ತು ವಕೀಲರಿಗೆ ಮಾತ್ರ ಸೀಮಿತವಾಗಿರಬಾರದು. ನ್ಯಾಯವು ಗ್ರಾಮೀಣ ಪ್ರದೇಶಗಳು ಮತ್ತು ತಾಂಡಾಗಳಲ್ಲಿರುವ ಸಾಮಾನ್ಯ ಜನರನ್ನು ತಲುಪಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನು ಸಿವರಾಮನ್‌ ತಿಳಿಸಿದರು.

ನಗರದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಬಂಜಾರ ಸಮುದಾಯದವರಿಗೆ ಏರ್ಪಡಿಸಿದ್ದ ಕಾನೂನು ಅರಿವು ಹಾಗೂ ಆರೋಗ್ಯ ತಪಾಸಣಾ ಶಿಬಿರ ಮತ್ತು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಗ್ರಂಥಪಾಲಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಸಮಾಜದ ಬಡ, ದಲಿತ, ಶೋಷಿತ ಮತ್ತು ದುರ್ಬಲ ವರ್ಗದವರಿಗೆ ನ್ಯಾಯ ತಲುಪಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ 4 ತಾಂಡಾಗಳಲ್ಲಿ ವಿಶೇಷ ಸಮೀಕ್ಷೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆಯ 3 ತಾಲೂಕುಗಳ 4 ಪ್ರಮುಖ ತಾಂಡಾಗಳಲ್ಲಿ ವಿಶೇಷ ಸಮೀಕ್ಷೆ ನಡೆಸಿದೆ. ಒಟ್ಟು 784 ಕುಟುಂಬಗಳನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ ಸೌಲಭ್ಯಗಳ ವಿತರಣೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದಂತೆ ಒಟ್ಟು 541 ಸಮಸ್ಯೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಕ್ ಮಾತನಾಡಿ, ಬಂಜಾರ ಸಮುದಾಯದವರು ಕಾನೂನಿನ ಅರಿವಿಲ್ಲದೆ ಹಿನ್ನಡೆಯಾಗಿ ಬದುಕು ಕಷ್ಟವಾಗುತ್ತಿದ್ದು, ಹಿಂಜರಿಯಬಾರದು. ಹೋರಾಟವಿಲ್ಲದೆ ಯಾವ ಫಲವೂ ಸಿಗುವುದಿಲ್ಲ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.

ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಜಾತಿ ಪ್ರಮಾಣ ಪತ್ರ ಪಡೆಯಲು, ಜನನ ಮತ್ತು ಮರಣ ಪ್ರಮಾಣ ಪತ್ರ, ಐ ಹೆಚ್ ಸಿ ಖಾತೆ, ಪಾರ್ಟಿಷನ್ ಡೀಡ್, ಪಹಣಿ ತಿದ್ದುಪಡಿ, ಇಖಾತಾ ಪೋರ್ಟಲ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆಗಳಿಗೆ ನೈಜ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಎನ್.ಜಯದೇವ ನಾಯ್ಕ ಮಾತನಾಡಿ, ರಾಜ್ಯದಲ್ಲಿನ ಸುಮಾರು 6000 ತಾಂಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೋರಾಟ ಮಾಡಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ. ಸಮುದಾಯದ ಅರ್ಹರಿಗೆ ವ್ಯಾಪಾರ ಮಾಡಲು1 ಲಕ್ಷ ರು., ಉದ್ಯಮಶೀಲತೆಗೆ ರು. 2 ಲಕ್ಷ , ಕಾರು ಖರೀದಿಗೆ 4 ಲಕ್ಷ ರು. ಸಬ್ಸಿಡಿ ಹಾಗೂ ಬೋರ್ ಕೊರೆಸಲು 3.75 ಸಾವಿರ ರು.ಬೋರ್ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಭೂ ಒಡೆತನ ಯೋಜನೆಯಡಿ ಹಳೇ ಮೈಸೂರು ಭಾಗಕ್ಕೆ 25 ಲಕ್ಷ ರು.ಮತ್ತು ಹೊಸ ಮೈಸೂರು ಭಾಗದ ಫಲಾನುಭವಿಗಳಿಗೆ 20 ಲಕ್ಷ ರು. ನೀಡಲಾಗುತ್ತಿದೆ. ಮಹಿಳೆಯರಿಗೆ ಗುಂಪು ಸಾಲ 5 ಲಕ್ಷ ರು. ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ತುಳಿತಕ್ಕೊಳಗಾದ ಸಮಾಜವನ್ನು ಪ್ರಗತಿ ಪಥದತ್ತ ಒಯ್ಯಲು ಕೆಲಸ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕಂದಾಯ ಗ್ರಾಮಗಳನ್ನು ಮಾಡಿ ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದ್ದು, ಜಿಲ್ಲಾಡಳಿತ ಸಹ ಕಾರ್ಯ ಕೈಗೊಂಡಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ. ಮಂಜುನಾಥ ಮಾತನಾಡಿ, ಜಿಲ್ಲೆಯ ವಿವಿಧ ತಾಂಡಾಗಳಲ್ಲಿ 90 ಸಾವಿರ ಜನರು ವಾಸ ಮಾಡುತ್ತಿದ್ದಾರೆ. ಇವರಿಗಾಗಿ ಸರ್ಕಾರ ನೀಡಿರುವ ವಿವಿಧ ಯೋಜನೆಗಳ, ಸೌಲಭ್ಯಗಳ ಮಾಹಿತಿ ಮತ್ತು ಪ್ರಯೋಜನ ನೀಡಲು 23 ವಿವಿಧ ಇಲಾಖೆಗಳು, ಸಂಸ್ಥೆಗಳು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಳಿಗೆಗಳನ್ನು ಸ್ಥಾಪಿಸಿವೆ ಎಂದರು.

ಕಾರ್ಯಕ್ರಮದಲ್ಲಿ ಪಿಎಂ ಸ್ವನಿಧಿ ಯೋಜನೆ, ಗುಂಪು ಸಾಲ, ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಶಶಿಧರ ಶೆಟ್ಟಿ, ಜಿ.ಪಂ.ಸಿಇಒ ಎನ್‌.ಹೇಮಂತ್ ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ಎನ್.ರಾಜು, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌.ಸಂತೋಷ್ ಇದ್ದರು.