ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗೋಬಿ ಮಂಚೂರಿಯನ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಬಳಸಬಾರದು. ಆಹಾರವು ಬಣ್ಣದಿಂದಲ್ಲ, ಅದರ ಗುಣಮಟ್ಟ ಮತ್ತು ರುಚಿಯಿಂದ ಜನರನ್ನು ಆಕರ್ಷಿಸಬೇಕು. ಒಂದೇ ಅಡುಗೆ ಎಣ್ಣೆಯನ್ನು ಮತ್ತೆ ಕಾಯಿಸಿ ಬಳಸುವುದರಿಂದ ಟ್ರಾನ್ಸ್‌ಫ್ಯಾಟ್‌ಗಳು ಉತ್ಪತ್ತಿಯಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಜಂಕ್ ಫುಡ್ ಬಳಕೆಯಿಂದ ಬಿಪಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ತಯಾರಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಕಬಾಬ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಲ್ಲಿ ನಿಷೇಧಿತ ರಾಸಾಯನಿಕ ಬಣ್ಣಗಳ ಬಳಕೆಯನ್ನು ತಡೆಯುವ ಉದ್ದೇಶದಿಂದ ತಾಲೂಕು ಕಚೇರಿಯಲ್ಲಿ ಜಾಗೃತಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್‌ ಶ್ರೀಧರ್ ಕಂಕಣವಾಡಿ, ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಿಗಳು ಸುರಕ್ಷಿತ ಹಾಗೂ ಗುಣಮಟ್ಟದ ಆಹಾರವನ್ನು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿದ್ದು, ಸರ್ಕಾರ ಈಗಾಗಲೇ ನಿಷೇಧಿತ ಬಣ್ಣಗಳ ಬಳಕೆಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ವ್ಯಾಪಾರಿಗಳಿಗೆ ದಂಡ ವಿಧಿಸುವುದಕ್ಕಿಂತ ಮೊದಲು ಜಾಗೃತಿ ಮೂಡಿಸುವುದೇ ಉದ್ದೇಶವಾಗಿದ್ದು, ಕೃತಕ ಬಣ್ಣಗಳು ಹಾಗೂ ರಾಸಾಯನಿಕಗಳು ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಅವುಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಹೇಳಿದರು.ಅಡುಗೆಗೆ ಬಳಸುವ ಎಣ್ಣೆಯನ್ನು ಪದೇ ಪದೆ ಕುದಿಸಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ ಅವರು, ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತಾ ಕಾಯ್ದೆಯಡಿ ದಂಡ ಹಾಗೂ ಕಾನೂನು ಕ್ರಮ ಜರುಗಿಸಬೇಕಾಗಬಹುದು. ದೇವಾಲಯದ ಹಿಂಭಾಗದಲ್ಲಿ ಸುಮಾರು ₹76 ಲಕ್ಷ ವೆಚ್ಚದಲ್ಲಿ ಫುಡ್ ಪಾರ್ಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರಿಂದ ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ ಎಂದರು.ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗೋಬಿ ಮಂಚೂರಿಯನ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಬಳಸಬಾರದು. ಆಹಾರವು ಬಣ್ಣದಿಂದಲ್ಲ, ಅದರ ಗುಣಮಟ್ಟ ಮತ್ತು ರುಚಿಯಿಂದ ಜನರನ್ನು ಆಕರ್ಷಿಸಬೇಕು. ಒಂದೇ ಅಡುಗೆ ಎಣ್ಣೆಯನ್ನು ಮತ್ತೆ ಕಾಯಿಸಿ ಬಳಸುವುದರಿಂದ ಟ್ರಾನ್ಸ್‌ಫ್ಯಾಟ್‌ಗಳು ಉತ್ಪತ್ತಿಯಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಜಂಕ್ ಫುಡ್ ಬಳಕೆಯಿಂದ ಬಿಪಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ತಯಾರಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಮಾತನಾಡಿ, ಕೃತಕ ಬಣ್ಣಗಳು, ಟೇಸ್ಟಿಂಗ್ ಪೌಡರ್‌ (ಅಜಿನೊಮೊಟೊ) ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಬಿಸಿ ಆಹಾರವನ್ನು ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕವರ್ ಹಾಗೂ ನ್ಯೂಸ್‌ಪೇಪರ್‌ನಲ್ಲಿ ನೀಡುವುದಕ್ಕೂ ನಿರ್ಬಂಧವಿದೆ.ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೊದಲ ಬಾರಿ ತಪ್ಪು ಕಂಡುಬಂದರೆ ₹1,000ರಿಂದ ₹5,000ವರೆಗೆ ದಂಡ ವಿಧಿಸಲಾಗುವುದು. ಗಂಭೀರ ಪ್ರಕರಣಗಳಲ್ಲಿ ₹25,000 ವರೆಗೆ ದಂಡ ಹಾಗೂ ಮರುಕಳಿಸಿದರೆ ಜೈಲು ಶಿಕ್ಷೆಯನ್ನೂ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕಿ ಉಷಾ, ತಿಂಡಿಗಾಡಿ ಹಾಗೂ ಹೋಟೆಲ್ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.