ಜ.11ರಂದು ಆಳಂದ ಪಟ್ಟಣಕ್ಕೆ ಜ್ಯೋತಿಯಾತ್ರೆ ಆಗಮನ

| Published : Jan 06 2024, 02:00 AM IST

ಸಾರಾಂಶ

ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ 2023ರ ನವೆಂಬರ್‌ 1ಕ್ಕೆ 50 ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಕರ್ನಾಟಕ ಸಂಭ್ರಮ 50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿಯಾತ್ರೆ.

ಕನ್ನಡಪ್ರಭ ವಾರ್ತೆ ಆಳಂದ

ಜ.11ರಂದು ತಾಲೂಕಿಗೆ ಪ್ರವೇಶಸಲಿರುವ ಕರ್ನಾಟಕ 50ರ ಜ್ಯೋತಿ ರಥಯಾತ್ರೆ ಸ್ವಾಗತ ಮತ್ತು ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಕೈಗೊಳ್ಳಲು ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧನಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರ್ನಾಟಕ 50ರ ಜ್ಯೋತಿ ರಥಯಾತ್ರೆ ಅದ್ಧೂರಿ ಸ್ವಾಗತಿಸುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆ ಮುಖಂಡರು ಒಪ್ಪಿಗೆ ಸೂಚಿಸಿದರು.

ಎಳ್ಳು ಅಮಾವಾಸ್ಯೆ ಹಬ್ಬದ ದಿನವಾದ ಜ.11ರಂದು ಎಲ್ಲರೂ ತಮ್ಮ ಹೊಲಗಳಿಗೆ ಹೋಗುತ್ತಾರೆ. ಈ ನಡುವೆ ಕನ್ನಡ ಜ್ಯೋತಿ ರಥಯಾತ್ರೆಯೂ ಬರಲಿದ್ದು, ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರು, ಶಾಲಾ. ಕಾಲೇಜು ವಿದ್ಯಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಾಗರಿಕರು ಪಾಲ್ಗೊಳ್ಳುವಂತಾಗಬೇಕು ಎಂದು ತಹಸೀಲ್ದಾರ ಹೇಳಿದರು.

ಕಸಾಪ ಅಧ್ಯಕ್ಷ ಹಣಮಂತ ಶೇರಿ, ಕರವೇ ಅಧ್ಯಕ್ಷ ಈರಣ್ಣಾ ಜಿ. ಆಳಂದ, ಜಯ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ನಾಗರಾಜ ಘೋಡಕೆ, ಸಾಹಿತಿ ವಿಶ್ವನಾಥ ಭಕರೆ, ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಮಹಾಂತೇಶ ಸಣ್ಣಮನಿ ಅವರು ಸಭೆಯಲ್ಲಿ ಮಾತನಾಡಿದರು. ಬಸ್ ನಿಲ್ದಾಣ ಮಾರ್ಗವಾಗಿ ರಜ್ವಿರೋಡ, ಮುಖ್ಯರಸ್ತೆ ಮಾರ್ಗವಾಗಿ ಶ್ರೀರಾಮ ಮಾರುಕಟ್ಟೆಯ ವರೆಗೆ ಕನ್ನಡ ಜ್ಯೋತಿರಥಯಾತ್ರೆಯ ಮೆರವಣಿಗೆ ಕೈಗೊಳ್ಳಲು ನಿರ್ಧರಿಸಲಾಯಿತು.

ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ 2023ರ ನವೆಂಬರ್‌ 1ಕ್ಕೆ 50 ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಕರ್ನಾಟಕ ಸಂಭ್ರಮ 50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಈ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ- ಕನ್ನಡಿಗ ಕರ್ನಾಟಕ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥ ಯಾತ್ರೆ ನಡೆಸಲು ಸರ್ಕಾರದಿಂದ ನಿರ್ಧರಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥ ಯಾತ್ರೆಯು ಜ. 11ರಂದು ಆಳಂದ ತಾಲೂಕಿಗೆ ಅಫಜಲಪೂರ ಮಾರ್ಗವಾಗಿ ತಾಲೂಕಿನ ನಿಂಬರಗಾ ಮಾರ್ಗವಾಗಿ ಭೂಸನೂರ ಕೊರಳ್ಳಿ ಮೂಲಕ ಪಟ್ಟಣಕ್ಕೆ ಆಗಮಿಸಲಿದೆ. ಮಾರ್ಗ ಮಧ್ಯದ ನಿಂಬರಗಾ, ಕೊರಳ್ಳಿ ಧಂಗಾಪೂರ ಗ್ರಾಮಗಳಲ್ಲಿ ಸ್ಥಳೀಯವಾಗಿ ರಥಕ್ಕೆ ಪೂಜೆ ನೆರವೇರಿಸಿ ಬೀಳ್ಕೊಡಬೇಕು ಎಂದು ತಹಸೀಲ್ದಾರರು ಹೇಳಿದರು.

ನಾಡ ತಹಸೀಲ್ದಾರ ಶ್ರೀನಿವಾಸ್ ಕುಲಕರ್ಣಿ, ಮುಖಂಡ ದಯಾನಂದ ಶೇರಿಕಾರ, ಸಿಡಿಪಿ ಶ್ರೀಕಾಂತ ಮೇಂಗಜಿ, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಕೈಗಾರಿಕೆ ಅಧಿಕಾರಿ ಜಾಫರ್ ಅನ್ಸಾರಿ, ಕೃಷಿ ಇಲಾಖೆಯ ಬಿ.ಎಂ. ಬಿರಾದಾರ, ಗ್ರಾಮೀಣ ನೀರು ಸರಬರಾಜು ಎಫ್‍ಡಿಎ ಕಿರಣ ಜಮಖಂಡಿ ಸೇರಿದಂತೆ ಬಿಸಿಎಂ, ಸಮಾಜಕಲ್ಯಾಣ ಸಹಾಯಕ ಅಧಿಕಾರಿಗಳು ಸೇರಿದಂತೆ ಸಭೆಯಲ್ಲಿ ತಾಲೂಕಿನ ಕನ್ನಡಪರ ಸಂಘಟನೆಗಳ ಪ್ರಮುಖರು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.