ಕೈದಿಗೆ ಹಲ್ಲೆ ಮಾಡಿದ ಸಹಕೈದಿಗಳ ವಿರುದ್ಧ ಕೆ-ಕೋಕಾ ಪ್ರಕರಣ ದಾಖಲು

| Published : Jul 25 2025, 01:14 AM IST

ಕೈದಿಗೆ ಹಲ್ಲೆ ಮಾಡಿದ ಸಹಕೈದಿಗಳ ವಿರುದ್ಧ ಕೆ-ಕೋಕಾ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿದ ನಾಲ್ವರು ಸಹ ಕೈದಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿದ ನಾಲ್ವರು ಸಹ ಕೈದಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಉಳ್ಳಾಲ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಮಿಥುನ್ ಎಂಬಾತನಿಗೆ ಸಹ ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ಎಂಬವರು ಜು.9ರಂದು ಸಂಜೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಹಲ್ಲೆ ನಡೆಸಿ 50 ಸಾವಿರ ರು. ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಜೈಲು ಅಧಿಕಾರಿಗಳಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ಮಿಥುನ್ ಪ್ರಾಣಭಯದಿಂದ ದೂರು ನೀಡದೆ ಹಲ್ಲೆ ನಡೆಸಿದ್ದ ಕೈದಿ ಸಚಿನ್ ಎಂಬಾತ ಕೊಟ್ಟ ಎರಡು ಮೊಬೈಲ್ ಸಂಖ್ಯೆಗೆ ಪತ್ನಿಯ ಮೂಲಕ 20 ಸಾವಿರ ರು. ಫೋನ್ ಪೇ ಮಾಡಿಸಿದ್ದ.ಜು.12ರಂದು ಮಂಗಳೂರು ಕೇಂದ್ರ ಸಹಾಯಕ ಪೊಲೀಸ್ ಆಯಕ್ತರು ಹಾಗೂ ಬರ್ಕೆ ಪೊಲೀಸ್ ಠಾಣೆಯ ನಿರೀಕ್ಷಕರು ಕಾರಾಗೃಹದ ತಪಾಸಣೆ ಮಾಡಲು ತೆರಳಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಜಿಲ್ಲಾ ಕಾರಾಗೃಹದ ಅಧೀಕ್ಷ ಶರಣಬಸಪ್ಪ ಅವರು ಬರ್ಕೆ ಠಾಣೆಗೆ ದೂರು ನೀಡಿದ್ದರು. ಇದೀಗ ಕೈದಿಗೆ ಜೈಲಿನಲ್ಲೇ ಹಲ್ಲೆ ನಡೆಸಿದ್ದ ಸಹಕೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೇ ಆರೋಪಿಗಳು ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಕೆ-ಕೋಕಾ ಕಾಯ್ದೆಯಡಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷದ ಶಿಕ್ಷೆ ವಿಧಿಸಬಹುದಾಗಿದ್ದು, ಅದನ್ನು ಜೀವಾವಧಿ ಶಿಕ್ಷೆಯವರಿಗೆ ವಿಸ್ತರಿಸಬಹುದಾಗಿದೆ. ಆರೋಪಿಗಳ ಕೃತ್ಯದಿಂದ ಸಾವು ಸಂಭವಿಸಿದರೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.