ಬಕ್ರೀದ್ ಹಬ್ಬದ ವಿಶೇಷತೆಯ ಬಗ್ಗೆ ಮುಸ್ಲಿಂ ಬಾಂಧವರಿಗೆ ಅರಿವು ಮೂಡಿಸುವುದರ ಜತೆಗೆ ರಾಜ್ಯದ ಮತ್ತು ದೇಶದ ಜನತೆ ಸಹಬಾಳ್ವೆ ಸಮೃದ್ಧಿ ಹಾಗೂ ಅ ಅಲ್ಲಾ ಹಿಂದೂ-ಮುಸ್ಲಿಂ ಎಂಬ ಬೇಧ- ಭಾವವಿಲ್ಲದೇ ಒಂದಾಗಿ ಹೋಗುವಂತಾಗಲಿ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸೋಮವಾರ ಶ್ರದ್ಧಾ- ಭಕ್ತಿಯಿಂದ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.

ಪಟ್ಟಣದ ಜಾಮೀಯಾ ಮಸೀದಿಯ ಬಳಿ ಜಮಾವಣೆಗೊಂಡು ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಜಾಮೀಯಾ ಮಸೀದಿ ಧರ್ಮಗುರು ಮುಫ್ತಿ ಜೈನೂಲ್ ಅಬಿಧೀನ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ಚಿಣ್ಣರು ಮತ್ತು ದೊಡ್ಡವರು ತಾರತಮ್ಯವಿಲ್ಲದೇ ಒಬ್ಬರನೊಬ್ಬರು ಆಲಂಗಿಸುವ ಮೂಲಕ ತಮ್ಮ ಆರಾಧ್ಯ ದೈವ ಅಲ್ಲಾನನ್ನು ಸ್ಮರಿಸಿ ಬಕ್ರೀದ್ ಹಬ್ಬದ ಸಡಗರ ಅನುಭವಿಸಿದರು.

ಬಕ್ರೀದ್ ಹಬ್ಬದ ವಿಶೇಷತೆಯ ಬಗ್ಗೆ ಮುಸ್ಲಿಂ ಬಾಂಧವರಿಗೆ ಅರಿವು ಮೂಡಿಸುವುದರ ಜತೆಗೆ ರಾಜ್ಯದ ಮತ್ತು ದೇಶದ ಜನತೆ ಸಹಬಾಳ್ವೆ ಸಮೃದ್ಧಿ ಹಾಗೂ ಅ ಅಲ್ಲಾ ಹಿಂದೂ-ಮುಸ್ಲಿಂ ಎಂಬ ಬೇಧ- ಭಾವವಿಲ್ಲದೇ ಒಂದಾಗಿ ಹೋಗುವಂತಾಗಲಿ ಎಂದು ಪ್ರಾರ್ಥಿಸಿದರು.

ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಬಳಿಕ ಖಬರಸ್ಥಾನಕ್ಕೆ ತೆರಳಿ ಪೂರ್ವಜರನ್ನು ಸ್ಮರಿಸಿದ ಆನಂತರ ಮನೆಯಲ್ಲಿ ಕುರಿ, ಮೇಕೆ ರೂಪದಲ್ಲಿ ಬಲಿದಾನ ಅರ್ಪಿಸಿ ಅದನ್ನು ಬಡವರಿಗೆ, ನೆರೆಹೊರೆಯವರಿಗೆ ಹಂಚಿದರು.

ಜಾಮೀಯಾ ಮಸೀದಿಯ ಕಿರಿಯ ಧರ್ಮ ಗುರುಗಳಾದ ಆಲಿ ಹುಸೇನ್, ಖ್ಯಾತ ಮೂಳೆ ತಜ್ಞ ಡಾ. ಮೆಹಬೂಬ್ ಖಾನ್, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಅಫ್ಸರ್ ಬಾಬು, ಕಾರ್ಯದರ್ಶಿ ತಸ್ಸಾವರ್ ಪಾಷ, ಸದಸ್ಯರಾದ ಇರ್ಷಾದ್, ನಸೀರ, ಮುಜಾಹಿದ್, ವಸೀಂ, ಫರೋಕ್, ಮುಬಾರಕ್, ಪುರಸಭೆ ಸದಸ್ಯ ಜಾವೀದ್ ಪಾಷ, ಮಾಜಿ ಅಧ್ಯಕ್ಷ ಸೈಯದ್ ಅಸ್ಲಾಂ, ಮುಸ್ಲಿಂ ಸಮಾಜದ ಮುಖಂಡರಾದ ಸೈಯದ್ ಜಾಬೀರ್, ನದೀಂ, ಸೈಯದ್ ಇರ್ಫಾನ್, ಮುಜಾಹೀದ್, ಮಹಮದ್ ಇರ್ಫಾನ್, ಜವಾದ್, ಶಾಕಿರ್, ಮುಬಾರಕ್, ನವೀದ್, ನವಾಜ್ ಇದ್ದರು.