ಸಾರಾಂಶ
ಗುಂಡ್ಲುಪೇಟೆ ಪಟ್ಟಣಕ್ಕೆ ಸರಬರಾಜಾಗುವ ಕಬಿನಿ ಕುಡಿವ ನೀರಿನ ಪೈಪ್ ಒಡೆದು ತಿಂಗಳೇ ಉರುಳಿದ ಕಾರಣ ರಸ್ತೆಯಲ್ಲಿ ಕಬಿನಿ ನೀರು ನಿಂತು ರಸ್ತೆಯಲ್ಲಿ ಗುಂಡಿ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣಕ್ಕೆ ಸರಬರಾಜು ಆಗುವ ಕಬಿನಿ ಕುಡಿವ ನೀರಿನ ಪೈಪ್ ನಂಜನಗೂಡು-ಹುಲ್ಲಹಳ್ಳಿ ರಸ್ತೆಯ ಮಹಾಲಕ್ಷ್ಮೀ ಪೆಟ್ರೊಲ್ ಬಂಕ್ ಬಳಿ ಒಡೆದರೂ ಇಲ್ಲಿನ ಪುರಸಭೆ ದುರಸ್ತಿ ಪಡಿಸದ ಹಿನ್ನೆಲೆ ರಸ್ತೇಲಿ ನೀರು ನಿಂತು ಗುಂಡಿ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಕಂಡು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ನಂದಕುಮಾರ್ ಗುಂಡಿ ಬಿದ್ದ ರಸ್ತೆಗೆ ವೆಡ್ ಮಿಕ್ಸ್ ಹಾಕಿ ರೋಲರ್ ಹೊಡೆಸಿ ಭಾನುವಾರ ಗುಂಡಿ ಮುಚ್ಚಿಸಿದ್ದಾರೆ.ಗುಂಡ್ಲುಪೇಟೆ ಪಟ್ಟಣಕ್ಕೆ ಸರಬರಾಜಾಗುವ ಕಬಿನಿ ಕುಡಿವ ನೀರಿನ ಪೈಪ್ ಒಡೆದು ತಿಂಗಳೇ ಉರುಳಿದ ಕಾರಣ ರಸ್ತೆಯಲ್ಲಿ ಕಬಿನಿ ನೀರು ನಿಂತು ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಲು ಆಗದೆ ಸವಾರರು ಹಾಗೂ ಪಾದಚಾರಿಗಳು ಗುಂಡ್ಲುಪೇಟೆ ಪುರಸಭೆಗೆ ಶಾಪ ಹಾಕುತ್ತಿದ್ದಾರೆ.
ಪುರಸಭೆಗೆ ಸರಬರಾಜಾಗುವ ಕಬಿನಿ ನೀರು ಇನ್ನೂ ಪೋಲಾಗುತ್ತಿದೆ. ರಸ್ತೆಯಲ್ಲಿ ನೀರು ನಿಂತರೆ ತಾನೇ ರಸ್ತೆಯಲ್ಲಿ ಗುಂಡಿ ಬೀಳೋದು ಎಂದು ಪೋಲಾಗುತ್ತಿರುವ ಕಬಿನಿ ನೀರನ್ನು ರಸ್ತೆಯ ಎಡ ಭಾಗದ ಜಮೀನಿಗೆ ಹರಿಯಲು ಬಿಟ್ಟಿದ್ದಾರೆ. ನಂಜನಗೂಡು ಹುಲ್ಲಹಳ್ಳಿ ರಸ್ತೆಯಲ್ಲಿ ಪಟ್ಟಣದ ಸಮೀಪ ಶಾಲೆಗಳಿವೆ. ಕಲ್ಯಾಣ ಮಂಟಪಗಳಿವೆ ಅಲ್ಲದೆ ನಂಜನಗೂಡು-ಹುಲ್ಲಹಳ್ಳಿಯ ಸಂಪರ್ಕ ಪ್ರಮುಖ ರಸ್ತೆಯಲ್ಲಿ ಕಬಿನಿ ನೀರಿಂದ ಗುಂಡಿ ಬೀಳುವುದನ್ನು ಕಂಡು ವೆಡ್ ಮಿಕ್ಸ್ ಹಾಕಿಸಿ, ರೋಲರ್ ಹೊಡೆಸಿ ರಸ್ತೆ ಸಮ ಮಾಡಲಾಗಿದೆ ಎಂದು ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ನಂದಕುಮಾರ್ ತಿಳಿಸಿದ್ದಾರೆ.