ಸಾರಾಂಶ
ಆರೋಪಿ ಅಬಿನ್ ಜೊತೆ ಕೇರಳದ ಎರ್ನಾಕುಲಂ ಮತ್ತು ತಮಿಳುನಾಡಿನ ಕೊಯಮುತ್ತೂರಿನ ಪ್ರದೇಶಕ್ಕೆ ತೆರಳಿ ಪೊಲೀಸ್ ತಂಡ ಪರಿಶೀಲನೆ ನಡೆಸಿತ್ತು. ಆರೋಪಿಯು ನೀಡಿದ ಸುಳಿವಿನ ಆಧಾರದಲ್ಲಿ ಆತನಿಗೆ ಸಹಕರಿಸಿದ ಆರೋಪದ ಮೇಲೆ ಕೇರಳದ ನಿವಾಸಿಗರೆನ್ನಲಾದ ಇಬ್ಬರನ್ನು ವಶಕ್ಕೆ ಪಡೆದು, ಕಡಬಕ್ಕೆ ಕರೆತಂದು ತನಿಖೆ ಮುಂದುವರಿದಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಡಬದ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಹಕಾರ ನೀಡಿದ ಆರೋಪದ ಮೇಲೆ ಕೇರಳದ ಇನ್ನಿಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಬಿನ್ ತಾನು ಪ್ರೀತಿಸುತ್ತಿದ್ದ ವಿದ್ಯಾರ್ಥಿನಿ ಪ್ರೀತಿಸಲು ನಿರಾಕರಿಸಿದಳೆಂಬ ಕಾರಣಕ್ಕೆ ಕಡಬ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಆ್ಯಸಿಡ್ ಎರಚಿದ್ದ. ಈ ವೇಳೆ ಆಕೆಯ ಪಕ್ಕದಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ಎರಚಲ್ಪಟ್ಟು ಮೂವರು ಗಾಯಗೊಂಡಿದ್ದರು. ಆರೋಪಿ ಅಬಿನ್‌ನನ್ನು ಕಾಲೇಜಿನ ವಿದ್ಯಾರ್ಥಿಗಳು ಹಿಡಿದು ಪೊಲೀಸರಿಗೊಪ್ಪಿಸಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಯು ಅಂದು ಕಡಬ ಕಾಲೇಜಿನ ಸಮವಸ್ತ್ರ ಹೋಲುವ ಪ್ಯಾಂಟ್ ಶರ್ಟ್ ಧರಿಸಿ ಕಾಲೇಜಿಗೆ ಬಂದಿದ್ದು, ಇದರ ಮೂಲ ಹಾಗೂ ಆ್ಯಸಿಡ್ ಎಲ್ಲಿ ಖರೀದಿಸಿದ್ದ ಎಂಬ ಬಗ್ಗೆ ಉಪ್ಪಿನಂಗಡಿ ವೃತ್ತ ನಿರೀಕ್ಷಕರ ನೇತೃತ್ವದ ತಂಡವು ತನಿಖೆ ಕೈಗೊಂಡಿತ್ತು.