ಸಾರಾಂಶ
ಚಿಕ್ಕಮಗಳೂರಿನ ಮಲ್ಲಂದೂರು ಸಮೀಪದ ಮಳಲೂರಮ್ಮ ದೇವಾಲಯ ಆವರಣದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕಸಭಾ ಕಾರ್ಯಕ್ರಮವನ್ನು ಪೊಲೀಸ್ ಉಪ ನಿರೀಕ್ಷಕ ಗುರುಸಜ್ಜನ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಧರ್ಮಸ್ಥಳ ಯೋಜನೆ ಸಂಘದ ಸದಸ್ಯರಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನಾ ಶಕ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ಕುಟುಂಬಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ ಎಂದು ಪೊಲೀಸ್ ಉಪ ನಿರೀಕ್ಷಕ ಗುರುಸಜ್ಜನ್ ಹೇಳಿದರು.ತಾಲೂಕಿನ ಮಲ್ಲಂದೂರು ಸಮೀಪದ ಮಳಲೂರಮ್ಮ ದೇವಾಲಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಟ್ರಸ್ಟ್, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಇಂದಿನ ಸಮಾಜದಲ್ಲಿನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಂತಹ ಧಾರ್ಮಿಕ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ಮತ್ತು ಗ್ರಾಮದ ಶ್ರೇಯಸ್ಸಾಗುತ್ತದೆ. ಎಲ್ಲರೂ ಹೊಂದಾಣಿಕೆಯಿಂದ ಬಾಳುವಂತೆ ಪ್ರೇರೇಪಣೆ ನೀಡಿದಂತಾಗಿರುತ್ತದೆ ಎಂದರು.ಒಗ್ಗಟ್ಟಿಗೆ, ಯಶಸ್ಸಿಗೆ, ಸಮಾನತೆಗೆ ಈ ಕಾರ್ಯಕ್ರಮ ಸಹಕಾರಿ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಮೂಡಿ ಬಂದಿದೆ. ಈ ಕಾರ್ಯಕ್ರಮದಲ್ಲಿ ಇಷ್ಟು ಜನ ಸೇರಿರುವುದಕ್ಕೆ ಸಂಘಟನಾಶ ಕ್ತಿ ಹೊಂದಾಣಿಕೆ ಮುಖ್ಯ ಎಂದು ತಿಳಿಸಿದರು.
ಜೋಳ್ದಾಳ್ ನಿವೃತ್ತ ಪ್ರಾಂಶುಪಾಲೆ ಚಾಂದಿನಿ ಅವರು ಉಪನ್ಯಾಸ ನೀಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಕೂಡ ಒಂದು ಈ ಕಾರ್ಯಕ್ರಮದಿಂದ ಜನರಲ್ಲಿ ಧಾರ್ಮಿಕತೆಯ ಬಗ್ಗೆ ಉತ್ತಮ ಸಂದೇಶ ತಿಳಿಸಲಾಗುತ್ತಿದೆ ಎಂದು ತಿಳಿಸಿದರು.ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಹಲವಾರು ಕಾರ್ಯಕ್ರಮ ನಡೆಸಿಕೊಳ್ಳುತ್ತಾ ಬರುತ್ತಿದೆ. ಇದರ ಸದುಪಯೋಗ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಎಂ.ಜೆ.ಸಂದೀಪ್, ಧಾರ್ಮಿಕ ಚಿಂತಕ ಚಂದ್ರಮೌಳಿ, ದೇವಾಲಯ ಅರ್ಚಕ ರಾಜಣ್ಣಗೌಡ, ಮೇಲ್ವಿಚಾರಕ ಮರುಳೇಶ್, ಶೌರ್ಯ ಸಂಯೋಜಕ ಸುಗುದೇವ್, ಆವತಿ ಬಿ. ಒಕ್ಕೂಟದ ಅಧ್ಯಕ್ಷೆ ಶೋಭಾ, ಬ್ಯಾರವಳ್ಳಿ ಒಕ್ಕೂಟದ ಅಧ್ಯಕ್ಷ ಜಿ.ಎನ್.ಉಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವರಾಜ್ ಸ್ವಾಗತಿಸಿದರು. ಶಿವಕುಮಾರ್ ನಿರೂಪಿಸಿದರು. ಪ್ರದೀಪ್ ವಂದಿಸಿದರು.