ಸಾರಾಂಶ
ಕಳೆದ ಹತ್ತು ದಿನಗಳಿಂದ ಕಾಡಾನೆ ಕಡಿರುದ್ಯಾವರ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಇಲ್ಲಿನ ರಾಮಂದೊಟ್ಟು, ಪಣಿಕಲ್ಲು, ಹಿತ್ತಿಲ ಕೋಡಿ, ಕೋಡಿ, ಎರುಬಳ್ಳಿ, ಕಾನರ್ಪ ಮುಂತಾದ ಪ್ರದೇಶಗಳ ಮನೆಗಳ ಅಂಗಳದ ತನಕವು ಬಂದಿತ್ತು.
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಜೋಡು ನೆರಳು ಬಸವದಡ್ಡು ಪ್ರದೇಶಗಳಲ್ಲಿ ಒಂಟಿ ಸಲಗ ಕೃಷಿ ತೋಟಗಳಿಗೆ ದಾಳಿ ಇಟ್ಟು ಹಾನಿ ಉಂಟು ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಇಲ್ಲಿನ ಶಂಕರ ಭಟ್, ಮಚ್ಚೇಂದ್ರ ನಾಯಕ್ ವಿಶ್ವನಾಥ ಪ್ರಭು, ಮಹೇಶ ಭಟ್, ನೀಲಯ್ಯ ಗೌಡ ರಾಮಚಂದ್ರ ಗೌಡ, ಪ್ರವೀಣ ಹಾಗೂ ಇನ್ನಿತರರ ತೋಟಗಳಿಗೆ ನುಗ್ಗಿದ ಸಲಗ ನೂರಾರು ಅಡಕೆ ಮರ, ಬಾಳೆ ಗಿಡಗಳನ್ನು ಪುಡಿಗೈದಿದೆ. ಹಲಸಿನ ಮರದಲ್ಲಿದ್ದ ಹಲಸಿನ ಹಣ್ಣುಗಳನ್ನು ತೆಗೆದುಹಾಕಿ ದಾಂದಲೆ ಎಬ್ಬಿಸಿದ ಕಾಡಾನೆ ಶಂಕರ ಭಟ್ ಎಂಬವರು ತೋಟದ ಬದಿಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ನೆಲಸಮಗೊಳಿಸಿದೆ.ಸ್ಥಳೀಯರೊಬ್ಬರು ತೋಟದಲ್ಲಿ ಔಷಧಿ ತಯಾರಿಗಾಗಿ ಇಟ್ಟಿದ್ದ 200 ಲೀಟರ್ ಡ್ರಮ್ಮನ್ನು ಆನೆಯು ಸಮೀಪದಲ್ಲಿ ಹರಿಯುವ ತೋಡಿಗೆ ದೂಡಿ ಹಾಕಿದ್ದು ಅದು ನೀರು ಪಾಲಾಗಿದೆ.
ಕಳೆದ ಹತ್ತು ದಿನಗಳಿಂದ ಕಾಡಾನೆ ಕಡಿರುದ್ಯಾವರ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಇಲ್ಲಿನ ರಾಮಂದೊಟ್ಟು, ಪಣಿಕಲ್ಲು, ಹಿತ್ತಿಲ ಕೋಡಿ, ಕೋಡಿ, ಎರುಬಳ್ಳಿ, ಕಾನರ್ಪ ಮುಂತಾದ ಪ್ರದೇಶಗಳ ಮನೆಗಳ ಅಂಗಳದ ತನಕವು ಬಂದಿತ್ತು.ವಿಪರೀತ ಮಳೆ ಇರುವ ಕಾರಣ ಕಾಡಾನೆ ಮನೆ ಹತ್ತಿರ ಬಂದರೂ ತೋಟದಲ್ಲಿ ಹಾನಿ ಉಂಟು ಮಾಡಿದರೂ ತಕ್ಷಣ ಗಮನಕ್ಕೆ ಬರುತ್ತಿಲ್ಲ ಪಟಾಕಿಗಳನ್ನು ಸಿಡಿಸಿದರೂ ಆನೆ ಓಡುತ್ತಿಲ್ಲ ಎಂದು ಇಲ್ಲಿನ ಕೃಷಿಕರು ತಿಳಿಸಿದ್ದಾರೆ.