ಕಡೂರು ಕೋರ್ಟ್‌ - ಪ್ರವಾಸಿ ಮಂದಿರದ ಬಳಿ ಫುಡ್ ಕೋರ್ಟ್ ನಿರ್ಮಾಣ

| Published : Oct 31 2024, 12:46 AM IST

ಸಾರಾಂಶ

ಕಡೂರು, ಪಟ್ಟಣದ ಎಲ್ಲೆಡೆ ರಸ್ತೆ ಬದಿಗಳಲ್ಲಿರುವ ತಿಂಡಿ ಗಾಡಿಗಳ ವ್ಯಾಪಾರಿಗಳಿಗೆ ಪಟ್ಟಣದ ಕೋರ್ಟ್‌ ಮುಂಭಾಗ ಮತ್ತು ಪ್ರವಾಸಿ ಮಂದಿರದ ಬಳಿ ಪುರಸಭೆಯಿಂದ ಫುಡ್ ಕೋರ್ಟ್ ನಿರ್ಮಾಣ ಮಾಡಿಕೊಡಲು ತೀರ್ಮಾನಿಸಲಾಯಿತು.

ಕಡೂರು ಪುರಸಭೆಯಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧಾರ

ಕನ್ನಡ ಪ್ರಭ ವಾರ್ತೆ, ಕಡೂರು

ಪಟ್ಟಣದ ಎಲ್ಲೆಡೆ ರಸ್ತೆ ಬದಿಗಳಲ್ಲಿರುವ ತಿಂಡಿ ಗಾಡಿಗಳ ವ್ಯಾಪಾರಿಗಳಿಗೆ ಪಟ್ಟಣದ ಕೋರ್ಟ್‌ ಮುಂಭಾಗ ಮತ್ತು ಪ್ರವಾಸಿ ಮಂದಿರದ ಬಳಿ ಪುರಸಭೆಯಿಂದ ಫುಡ್ ಕೋರ್ಟ್ ನಿರ್ಮಾಣ ಮಾಡಿಕೊಡಲು ತೀರ್ಮಾನಿಸಲಾಯಿತು.

ಕಡೂರು ಪುರಸಭೆ ಕನಕ ಸಭಾಂಗಣದಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿಯೀ ನಿರ್ಧಾರ ಕೈಗೊಳ್ಳಲಾಯಿತು. ದಿನ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು, ರಸ್ತೆ ಬದಿಗಳಲ್ಲಿ ಹೆಚ್ಚುತ್ತಿರುವ ತಿಂಡಿ ಗಾಡಿಗಳಿಂದ ಸಂಚಾರಕ್ಕೆಅಡ್ಡಿ ಆಗುತ್ತಿರುವ ಕಾರಣ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಪುರಸಭೆಯಿಂದಲೇ ಫುಡ್ ಕೋರ್ಟನ್ನು ಮೂಲ ಸವಲತ್ತುಗಳೊಂದಿಗೆ ನ್ಯಾಯಾಲಯದ ಮುಂಭಾಗ ಮತ್ತು ಪ್ರವಾಸಿ ಮಂದಿರದ ಬಳಿ ನಿರ್ಮಿಸಲು ಸದಸ್ಯರು ಸಮ್ಮತಿ ನೀಡಿದರು.

ಪಟ್ಟಣದ ಪೇಟೆ ಗಣಪತಿ- ಆಂಜನೇಯ ದೇವಾಲಯದ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಿಯಾದ ಹೂವಿನ ಅಂಗಡಿಗಳನ್ನು ತೆರವು ಗೊಳಿಸಿ ಪ್ರತ್ಯೇಕ ಹೂವಿನ ಸ್ಥಾಲ್ ಗಳನ್ನು ನಿರ್ಮಾಣ ಮಾಡಲು ಸಭೆ ತೀರ್ಮಾನಿಸಿತು. ಅಲ್ಲದೆ, ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಲ್.ವಿ ವೃತ್ತದಲ್ಲಿ ಹಿಂದಿನ ವೈಭವ ಮರುಕಳಿಸುವಂತೆ ಹೊಸದಾಗಿ ನೀರಿನ ಕಾರಂಜಿ ನಿರ್ಮಾಣಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಹಳೆ ಸಂತೆ ಮೈದಾನದ ಐ ಡಿ ಎಸ್ ಎಂ ಟಿ ಯೋಜನೆಯಲ್ಲಿ ಕಟ್ಟಿದ್ದ ಸುಮಾರು 84 ಮಳಿಗೆಗಳು ಶಿಥಿಲ ವಾಗಿರುವ ಕಾರಣ ಅದನ್ನು ತೆರವುಗೊಳಿಸಲು ತೀರ್ಮಾನಿಸಲಾಯಿತು.

ಸಭೆಗೆ 8 ದಿನ ಮುಂಚೆ ಸದಸ್ಯರಿಗೆ ಮಾಹಿತಿ ನೀಡದೆ ದಿಢೀರ್ ಸಭೆ ಕರೆಯಲಾಗಿದೆ ಸದಸ್ಯರಿಗೆ ಗೌರವ ಇಲ್ಲವೇ ಎಂದು ಸದಸ್ಯ ತೋಟದಮನೆ ಮೋಹನ್ ಆಕ್ರೋಶ ವ್ಯಕ್ತಪಡಿಸಿದಾಗ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಅಧಿಕಾರಿಗಳು ಕ್ರಮ ವಹಿಸಲು ಸೂಚನೆ ನೀಡಿದರು.

ಪುರಸಭೆ ಅಧಿಕಾರಿಗಳು ನಮ್ಮ ವಾರ್ಡ್ ಗಳಲ್ಲಿ ಕೈಗೊಳ್ಳುವ ಅಭಿವೃದ್ಧಿ ವಿಚಾರಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಕೊಡುವುದಿಲ್ಲ ಎಂದು ಸದಸ್ಯರಾದ ಗೋವಿಂದರಾಜು, ಹಾಲಮ್ಮ ಮತ್ತು ಜ್ಯೋತಿ ಆನಂದ್ ದೂರಿದಾಗ ಅಧ್ಯಕ್ಷರು ಈ ಬಗ್ಗೆ ಇಂಜಿನಿಯರ್ ಜಗದೀಶ್ ಗೆ ಆಯಾ ಭಾಗದ ಸದಸ್ಯರಿಗೆ ಮಾಹಿತಿ ನೀಡಿ ಕಾಮಗಾರಿ ಮಾಡಬೇಕು ಎಂದರು.

ಸದಸ್ಯ ಮರುಗುದ್ದಿ ಮನು, ಪಟ್ಟಣದಲ್ಲಿ ಖ್ಯಾತ ನಟ ಡಾ. ವಿಷ್ಣುವರ್ಧನ್ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬೇಕು ಎಂದಾಗ ತೋಟದಮನೆ ಮೋಹನ್ ನಾವು ಕೂಡ ವಿಷ್ಣುವರ್ಧನ್ ಅಭಿಮಾನಿಗಳೇ ಕಡೂರಿಗೆ ಭದ್ರಾ ಕುಡಿವ ನೀರು ತಂದ ದಿ. ಕೆ.ಎಂ ಕೃಷ್ಣಮೂರ್ತಿ ಪ್ರತಿಮೆ ಸ್ಥಾಪನೆಗೆ ಪುರಸಭೆ ಕ್ರಮ ವಹಿಸಬೇಕು ಎಂದು ಮವನಿ ಮಾಡಿದರು.

22ನೇ ವಾರ್ಡಿನಲ್ಲಿ ವಾಲ್ಮೀಕಿ ಜನಾಂಗದವರು ಹೆಚ್ಚಿರುವ ಕಾರಣ ವಾಲ್ಮೀಕಿ ಹೆಸರನ್ನು ಮತ್ತು ಕೋಟೆ ಅಗಳು ಪ್ರದೇಶಕ್ಕೆಅಮರ ಶಿಲ್ಪಿ ಜಕಣಾಚಾರಿ ಹೆಸರಿಡಬೇಕು ಎಂದು ಸದಸ್ಯ ಗೋವಿಂದರಾಜು ಆಗ್ರಹಿಸಿದಾಗ ಸಭೆ ಒಪ್ಪಿಗೆ ನೀಡಿತು.

ಸದಸ್ಯ ಈರಳ್ಳಿ ರಮೇಶ್, ಮನೆಗಳ ತೆರಿಗೆ ಹೆಚ್ಚಿಸಿ ಆದರೆ ಕುಡಿಯುವ ನೀರಿಗೆ ಹೆಚ್ಚಿನ ದರ ವಿಧಿಸುವುದು ಬೇಡ ಎಂದು ಮನವಿ ಮಾಡಿದರು.

ಪತ್ರಕರ್ತರಿಗೆ ಪಟ್ಟಣದಲ್ಲಿರುವ ಕನ್ನಡ ಕಲಾ ಸಂಘದ ಕಟ್ಟಡವನ್ನು ಪತ್ರಕರ್ತರ ಕಾರ್ಯ ಚಟುವಟಿಕೆಗಳಿಗೆ ನೀಡಲು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹಾಗೂ ಸದಸ್ಯರು ಒಪ್ಪಿಗೆ ನೀಡಿದರು.

ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ ಎಸ್ ಮಂಜುನಾಥ್, ಸದಸ್ಯರಾದ, ಜಿ. ಸೋಮಯ್ಯ, ಮಂಡಿ ಇಕ್ಬಾಲ್, ಯಾಸಿನ್, ಪುಷ್ಪಾ ಮಂಜುನಾಥ್,ಪದ್ಮಾಶಂಕರ್,ಭಾಗ್ಯಮ್ಮ ಸೇರಿದಂತೆ 22 ಸದಸ್ಯರು ಮೊದಲ ಸಭೆಯಲ್ಲಿ ಹಾಜರಿದ್ದರು.

ತಿಮ್ಮಯ್ಯ ಪ್ರೇಮ್, ಜಗದೀಶ್ ಮತ್ತು ಸಿಬ್ಬಂದಿ ಹಾಜರಿದ್ದರು

30 ಕೆಕೆಡಿಯು1.

ಕಡೂರು ಪಟ್ಟಣದ ಪುರಸಭೆಯ ಕನಕ ಸಭಾಂಗಣದಲ್ಲಿ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

--ಬಾಕ್ಸ್ಗೆ-

ಕಡೂರು ಪಟ್ಟಣಕ್ಕೆ ಜಲಜೀವನ್ ಮಿಷನ್ ಅಡಿ 20 ಲಕ್ಷ ಲೀ. ಸಾಮರ್ಥ್ಯದಲ್ಲಿ 12,000 ಮನೆಗಳಿಗೆ ನೀರು ನೀಡುವ ಯೋಜನೆಗೆ ಸದಸ್ಯರ ಸಹಕಾರದ ಮೂಲಕ ಮುಂದಿನ 15 ವರ್ಷಗಳಿಗೆ ಅನುಗುಣವಾಗಿ ಡಿಪಿಆರ್ ತಯಾರು ಮಾಡಲಾಗಿದೆ. ₹168 ಕೋಟಿ ಯೋಜನೆಗೆ ಪುರಸಭೆಯಿಂದ ₹8 ಕೋಟಿ ಹೊಂದಾಣಿಕೆ ಹಣ ನೀಡಬೇಕು ಎಂದು ಅಧಿಕಾರಿಗಳು ಹೇಳಿದಾಗ, ಪುರಸಭೆಯಿಂದ ಹಣ ಕಟ್ಟಲು ಆಗದ ಕಾರಣ ಶಾಸಕರ ಗಮನಕ್ಕೆ ತಂದು ಬೇರೆ ಅನುದಾನದಲ್ಲಿ ಸರ್ಕಾರವೇ ಭರಿಸುವಂತೆ ಸದಸ್ಯರೊಂದಿಗೆ ಮನವಿ ಮಾಡುತ್ತೇವೆ.

- ಭಂಡಾರಿ ಶ್ರೀನಿವಾಸ್, ಅಧ್ಯಕ್ಷ

- ಬಾಕ್ಸ್ -

ಪುರಸಭೆ ಸದಸ್ಯರು ಆನ್ಲೈನ್ ಮೂಲಕ ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಅದರಂತೆ ಪ್ರತಿ ಸದಸ್ಯರು ಆಸ್ತಿ ಘೋಷಣೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

30 ಕೆಕೆಡಿಯು1

ಕಡೂರು ಪುರಸಭೆಯ ಕನಕ ಸಭಾಂಗಣದಲ್ಲಿ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.