ಸಾರಾಂಶ
ಗುರುವಾರರಾತ್ರಿ ನಡೆದ ನೇಮೋತ್ಸವದಲ್ಲಿ ದೈವದ ವಲಸರಿಗೆಂದೇ ಹೊಸದಾಗಿ ಖರೀದಿಸಲಾದ ದೋಣೆಯಲ್ಲಿ ಹಿನ್ನೀರು ತುಂಬಿರುವ ನೇತ್ರಾವತಿ ನದಿಯನ್ನು ದಾಟಿ ಕಲ್ಕುಡ ದೈವವು ಶುಕ್ರವಾರ ನಸುಕಿನಲ್ಲಿ ವಲಸರಿ ನಡೆಸಿತು.
ಉಪ್ಪಿನಂಗಡಿ: ಪೌರಾಣಿಕ ಐತಿಹ್ಯವನ್ನು ಹೊಂದಿರುವ, ಉಪ್ಪಿನಂಗಡಿ ಕಡವಿನಬಾಗಿಲು ಕಲ್ಕುಡ ದೈವಸ್ಥಾನದ ನೇಮೋತ್ಸವದಲ್ಲಿ ನಡೆಯುವ ದೈವದ ವಲಸರಿಯು ಈ ಬಾರಿ ನದಿಯಲ್ಲಿನ ಅಣೆಕಟ್ಟಿನ ಹಿನ್ನೀರಿನ ಕಾರಣಕ್ಕೆ ದೋಣಿಯಲ್ಲೇ ಸಾಗುವ ಮೂಲಕ ಗಮನ ಸೆಳೆಯಿತು.
ಕಲ್ಕುಡ – ಮತ್ತು ಕಲ್ಲುರ್ಟಿ ದೈವಗಳು ಕಡವಿನಬಾಗಿಲಲ್ಲಿನ ದೋಣಿ ಚಲಾಯಿಸುವವರಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವರಿಗೆ ಪ್ರಾರ್ಥನೆ ಹಾಗೂ ಕಾಣಿಕೆ ಸಲ್ಲಿಸಲು ಬೇಡಿಕೊಂಡ ಐತಿಹ್ಯವಿದೆ. ಅದರಂತೆ ಪ್ರತಿ ವರ್ಷದ ನೇಮೋತ್ಸವದಲ್ಲಿ ದೈವವು ಕಡವಿನ ಬಾಗಿಲಿನಿಂದ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ನದಿ ದಾಟಿ ಬರುವುದು ವಾಡಿಕೆ. ಈ ಹಿಂದೆಲ್ಲಾ ನೇಮೋತ್ಸವದ ಸಮಯದಲ್ಲಿ ನದಿಯ ನೀರಿನ ಮಟ್ಟ ತೀರಾ ಕುಸಿಯುತ್ತಿದ್ದು, ಸುಲಭ ಸಾಧ್ಯವಾಗಿ ಕಾಲ್ನಡಿಗೆಯಲ್ಲೇ ವಲಸರಿ ವಿಧಿ ವಿಧಾನ ನಡೆಯುತ್ತಿತ್ತು. ಈ ಬಾರಿ ದೈವಸ್ಥಾನದಲ್ಲಿ ಹೊಸಕಟ್ಟೆಗಳ ನಿರ್ಮಾಣ ನಡೆದಿದ್ದು, ಈ ಕಾರಣಕ್ಕೆ ಬ್ರಹ್ಮಕಲಶೋತ್ಸವವು ಗುರುವಾರದಂದು ನಡೆದಿತ್ತು. ರಾತ್ರಿ ನಡೆದ ನೇಮೋತ್ಸವದಲ್ಲಿ ದೈವದ ವಲಸರಿಗೆಂದೇ ಹೊಸದಾಗಿ ಖರೀದಿಸಲಾದ ದೋಣೆಯಲ್ಲಿ ಹಿನ್ನೀರು ತುಂಬಿರುವ ನೇತ್ರಾವತಿ ನದಿಯನ್ನು ದಾಟಿ ಕಲ್ಕುಡ ದೈವವು ಶುಕ್ರವಾರ ನಸುಕಿನಲ್ಲಿ ವಲಸರಿ ನಡೆಸಿತು.ಉಪ್ಪಿನಂಗಡಿ ಜಾತ್ರೆಯಲ್ಲಿ ಈ ಬಾರಿ ಹಲವು ಬದಲಾವಣೆ: ಸಾಮೂಹಿಕ ಪ್ರಾರ್ಥನೆ
ಉಪ್ಪಿನಂಗಡಿ: ಅಣೆಕಟ್ಟಿನ ಹಿನ್ನೀರಿನಿಂದಾಗಿ ಈ ಬಾರಿಯ ಉಪ್ಪಿನಂಗಡಿ ಶ್ರೀ ಸಹಸ್ರ‍್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಜಾತ್ರೋತ್ಸವದಲ್ಲಿ ಆಗುವ ಮಹತ್ತರ ಬದಲಾವಣೆಗಳ ನಿಮಿತ್ತ ಶುಕ್ರವಾರದಂದು ಶ್ರೀ ದೇವಳದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶಾಭಿಷೇಕ ನೆರವೇರಿಸಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ಕೇತ್ರದ ತಂತ್ರಿಗಳಾದ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶಾಭಿಷೇಕವನ್ನು ನೆರವೇರಿ,ಸಾಮೂಹಿಕ ಪ್ರಾರ್ಥನೆಯನ್ನೂ ಮಾಡಲಾಯಿತು. ನದಿಯ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ಈ ಬಾರಿ ಯಾವುದೇ ಬಗೆಯ ಪೂಜೆ ಪುನಸ್ಕಾರಗಳು ನಡೆಸಲು ಅಸಾಧ್ಯವಾಗಿರುವ ಬಗ್ಗೆ, ಅವಭೃತ ಸ್ನಾನ ಸಹಿತ ಹಲವಾರು ವಿಧಿ ವಿಧಾನಗಳಲ್ಲಿನ ವ್ಯತ್ಯಯದ ಬಗ್ಗೆ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ, ಅರ್ಚಕ ಮಧುಸೂಧನ ಭಟ್ , ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಆಡಳಿತಾಧಿಕಾರಿಯ ಪರವಾಗಿ ಆಗಮಿಸಿದ ಉಪ ತಹಸೀಲ್ದಾರ್ ಚೆನ್ನಪ್ಪ ಗೌಡ, ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಕೆ ರಾಧಾಕೃಷ್ಣ ನಾಯ್ಕ್, ಡಾ. ರಾಜಾರಾಮ ಕೆ.ಬಿ., ಅರ್ತಿಲ ಕೃಷ್ಣ ರಾವ್, ಹರಿರಾಮಚಂದ್ರ, ರಾಮಚಂದ್ರ ಮಣಿಯಾಣಿ, ಸುಧಾಕರ ಶೆಟ್ಟಿ, ಚಂದಪ್ಪ ಮೂಲ್ಯ, ಕೆ ಜಗದೀಶ್ ಶೆಟ್ಟಿ, ರೂಪೇಶ್ ರೈ ಅಲಿಮಾರ, ವಿನಯಾ ರಾಜಾರಾಮ ರೈ, ಪೂರ್ಣಿಮಾ ಸುರೇಶ್ , ಮಂಜುಳಾ ಸೀತಾರಾಮ್ , ಕಿಶೋರ್ ಜೋಗಿ, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಪದ್ಮನಾಭ ಕುಲಾಲ್, ದಿವಾಕರ ಗೌಡ, ಕೃಷ್ಣ ಪ್ರಸಾದ್, ಮತ್ತಿತರರು ಭಾಗವಹಿಸಿದ್ದರು.