ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಯಾರು ಸನ್ಮಾನಕ್ಕೆ ಒಳಗಾಗಿದ್ದಾರೋ, ಅವರ ಶ್ರೇಷ್ಠತೆ, ಮಾದರಿ, ಕೆಲಸ ಎಲ್ಲವನ್ನೂ ನಾವು ನೆನಪಿಟ್ಟುಕೊಂಡು, ಸಾಧ್ಯವಾದಷ್ಟು ಅನುಸರಿಸುವ ಕಾರ್ಯ ಆಗಬೇಕು. ಇದು ಸಫಲ, ಸಾರ್ಥಕ ಆಗುವುದಾದರೆ ಅವರ ಸಾಧನೆಯ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಎಂದು ಸಾಮಾಜಿಕ ಚಿಂತಕ ಬಿ.ಆರ್. ಜಯಂತ್ ಅಭಿಪ್ರಾಯಪಟ್ಟರು.ಪಟ್ಟಣದ ಗಾಂಧಿ ಮೈದಾನದಲ್ಲಿ ಭಾನುವಾರ ನಾಗರೀಕ ಅಭಿನಂದನಾ ಸಮಿತಿ ನೇತೃತ್ವದಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಮತ್ತಿಕೊಪ್ಪ ಹರನಾಥ ರಾವ್ ಅವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಗೋಡು ತಿಮ್ಮಪ್ಪ ಅವರು ಸಾಮಾನ್ಯ ಕುಟುಂಬದಿಂದ ಬಂದು ಲೋಹಿಯಾ, ಗೋಪಾಲಗೌಡರ ಸಿದ್ಧಾಂತ ಆದರ್ಶಗಳ ಮೂಲಕ ಹೋರಾಟದ ಕಿಚ್ಚಿನಲ್ಲಿ ಬೆಳೆದು ಸಮಾಜದ ಆಸ್ತಿಯಾಗಿದ್ದಾರೆ. ಅಲ್ಲದೇ, ಕಗ್ಗದ ಮಾತಿನಂತೆ ದೀನ ದುರ್ಬಲರಿಗೆ ಕಲ್ಲು ಸಕ್ಕರೆಯಂತಿದ್ದರು. ಅವರ ಹೋರಾಟ, ಸಾಧಿಸುವ ಹಠ, ನೇರ ನಡೆ- ನುಡಿ ನಾವೆಲ್ಲ ಕಲಿಯಬೇಕಾದ ಪಾಠವಾಗಿದೆ. ಸಮಾಜವಾದ, ಸಾಮಾಜಿಕ ನ್ಯಾಯಧರ್ಮ ನಿರಪೇಕ್ಷೆ ಮನಸ್ಥಿತಿ ನಾಯಕರಿಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯದ ಕುರಿತಾಗಿ ಹಲವರಿಗೆ ತಪ್ಪು ಕಲ್ಪನೆಗಳಿವೆ. ಮೇಲ್ವರ್ಗದ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟುತ್ತಾರೆ. ಅಂಥ ವಿರೋಧವನ್ನು ಮೆಟ್ಟಿ ನಿಂತು, ತಮ್ಮ ಜೀವಮಾನದ ಉದ್ದಕ್ಕೂ ಕಾಗೋಡು ಜನರಿಗಾಗಿಯೇ ಹೋರಾಟ ನಡೆಸಿದ್ದಾರೆ. ಅದನ್ನು ಮಾಡಿದ್ದರಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದರು.ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಹರನಾಥ ರಾವ್ ಅವರು ಕೈ-ಬಾಯಿ ಸ್ವಚ್ಛವಾಗಿಟ್ಟುಕೊಂಡವರು. ತಮ್ಮ ಕೈಲಿದ್ದುದನ್ನು ಕಳೆದುಕೊಂಡು ಸಾಲಗಾರರೇ ಆಗಿದ್ದರು. ಆದರೂ ಸಮಾಜಕ್ಕಾಗಿ ತಾವು ನಂಬಿದ ಆದರ್ಶಕ್ಕಾಗಿ ಹೋರಾಡುವ ಛಾತಿಯನ್ನು ಬಿಡಲಿಲ್ಲ. ಬರಿಗಾಲ ಫಕೀರನಾದರೂ ಸಂಘಟನಾ ಶಕ್ತಿ ಇದೆ. ಅಡಕೆ ಬೆಳೆಗಾರರ ಪರವಾಗಿ, ಆಗಬೇಕಿರುವ ಬದಲಾವಣೆಗಳನ್ನು ಅರಿತು ಸಮಾಜಮುಖಿಯಾಗಿ ಕೆಲಸ ಮಾಡಿದ್ದರ ಫಲವನ್ನು ಇಂದು ನಾವೆಲ್ಲ ಉಣ್ಣುತ್ತಿದ್ದೇವೆ. ಮುಖ್ಯವಾಗಿ ಇವರಿಬ್ಬರ ನಡೆ, ನುಡಿ ಜನಪರ ಕೆಲಸ ಮಾಡುವವರಿಗೆ ದಾರಿದೀಪ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಅರಸು ಪ್ರಶಸ್ತಿ ಕಾಗೋಡು ಅವರಿಗೆ ಸಿಕ್ಕಿದ್ದು, ಪ್ರಶಸ್ತಿಗೆ ಸಾರ್ಥಕ. ಸಮಾಜದಲ್ಲಿ ಸಮಾನತೆಯ ಧ್ವನಿ ಎತ್ತಿದವರಲ್ಲಿ ಅರಸು ಅವರಂತೆಯೇ ಕಾಗೋಡು ಅಗ್ರಗಣ್ಯರು. ಹಂಗಾಗಿ, ಇಂಥ ಪ್ರಶಸ್ತಿಗಳು ಬಂದಾಗ ನಾಗರೀಕ ಸನ್ಮಾನ ಅಗತ್ಯ. ಇದು ಹಿರಿಯಲ್ಲೂ ಮತ್ತಷ್ಟು ಶಕ್ತಿ ತುಂಬುತ್ತದೆ ಎಂದರು.ಸಚಿವ ಮಧು ಬಂಗಾರಪ್ಪ ಮಾತನಾಡಿ, ಹೋರಾಟದ ಪವಿತ್ರತೆ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಅದೇ ಅವರಿಗೆ ಸಲ್ಲಿಸುವ ಅತಿದೊಡ್ಡ ಗೌರವವಾಗಿದೆ. ಇವರಿಬ್ಬರೂ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದವರು ಎನ್ನುವುದು ಅವರ ಕೆಲಸಗಳಿಂದ ಅರಿವಾಗುತ್ತದೆ ಎಂದರು.
ಸಂಸದ ರಾಘವೇಂದ್ರ ಮಾತನಾಡಿ, ತಾಲೂಕು, ಜಿಲ್ಲೆ, ರಾಜ್ಯದ 2 ಕಣ್ಣುಗಳಿವು. ಮುತ್ಸದ್ದಿಗಳ ಸನ್ಮಾನವು ಇಂದಿನ ಯುವ ಪೀಳಿಗೆಗೆ ಹೋರಾಟ, ನಡೆ, ಧಾರೆ ಎರೆಯುವ ಸಮಾರಂಭ ಇದಾಗಿದೆ. ರಾಜಕೀಯದಲ್ಲಿ ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡುವುದು ಸಾಮಾನ್ಯ. ಆದರೆ, ಸೋತಾಗಲೂ ವಿರೋಧಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದನ್ನು ಕಾಗೋಡು ತಿಮ್ಮಪ್ಪ ಅವರಿಂದ ಕಲಿತಿದ್ದೇನೆ. ಸದಾ ಜನಪರ ಚಿಂತನೆಗಳೊಂದಿಗೆ, ತಂದೆಯಂತೆ ಬೆನ್ನುತಟ್ಟಿ ಮಾರ್ಗದರ್ಶನ ಮಾಡಿದ್ದರು. ಚುನಾವಣೆ ಬಂದಾಗ ರಾಜಕಾರಣ, ಉಳಿದ ಸಮಯದಲ್ಲಿ ಜನರ ಕಷ್ಟ, ತೊಂದರೆಗಳ ಪರಿಹಾರಕ್ಕೆ ಹಾತೊರೆಯುವ ಮನಸ್ಸು ಮುಖ್ಯ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಅಶ್ವಿನಿ ಕುಮಾರ್, ಇಂದೂಧರಗೌಡ, ಮೊದಲಾದವರು ಮಾತನಾಡಿದರು. ಪ್ರಮುಖರಾದ ಪ್ರಫುಲ್ಲ ಮಧುಕರ್, ಹಕ್ರೆ ಮಲ್ಲಿಕಾರ್ಜುನ, ಡಾ.ರಾಜನಂದಿನಿ ಕಾಗೋಡು, ಪಾಂಡುರಂಗ, ಗುಂಡಪ್ಪ, ಕಲಸಿ ಚಂದ್ರಪ್ಪ, ಮೊಹಮ್ಮದ್ ಖಾಸಿಂ ಸೇರಿದಂತೆ ಸಮಿತಿಯ ಸದಸ್ಯರು, ಗಣ್ಯರು ಹಾಜರಿದ್ದರು.
- - - ಕೋಟ್ ರಾಜಕೀಯ ಚೌಕಟ್ಟನ್ನೂ ಮೀರಿ, ಹಿರಿಯರ ಮಾತುಗಳನ್ನು ನೋಡುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ಕಾಗೋಡು ತಿಮ್ಮಪ್ಪ ಅವರು, ಶಾಮನೂರು ಶಿವಶಂಕರಪ್ಪನವರು ನಮ್ಮಂಥ ಕಿರಿಯರಿಗೆ ಕಿವಿಮಾತು ಹೇಳಿದಾಗ ಅದಕ್ಕೆಅಪಾರ ಅರ್ಥ ಕಲ್ಪಿಸುವುದು ಒಳ್ಳೆಯ ಪದ್ಧತಿಯಲ್ಲ- ಬಿ.ವೈ.ರಾಘವೇಂದ್ರ, ಸಂಸದ
- - - ಬಾಕ್ಸ್ಎಚ್.ಕೆ.ಪಾಟೀಲ್, ಎಸ್.ಬಂಗಾರಪ್ಪ ಪ್ರಾತಃ ಸ್ಮರಣೀಯರು: ಹರನಾಥ ರಾವ್ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹರನಾಥ ರಾವ್ ಮತ್ತಿಕೊಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಯಾವುದೇ ಕೆಲಸವೂ ಒಬ್ಬರಿಂದ ಆಗಿದ್ದಲ್ಲ. ಇದೆಲ್ಲವೂ ತಂಡದ ಕೆಲಸ. ನಾನೊಬ್ಬನ್ನೇ ಮಾಡಿದ್ದೇನೆ ಎಂದರೆ ತಪ್ಪಾಗುತ್ತದೆ. ಮಾಜಿ ಸಚಿವ ಎಚ್.ಕೆ. ಪಾಟೀಲರು ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅಡಕೆ ಬೆಳೆಗಾರರಿಗೆ ಪ್ರಾತಃ ಸ್ಮರಣೀಯರು. ಅವರು ಮಾಡಿದ ಕೆಲಸಗಳಿಂದ ನಾವೆಲ್ಲ ಖುಷಿಯಿಂದ ಬದುಕುತ್ತಿದ್ದೇವೆ. ಸರ್ಕಾರ ನಮ್ಮ ಸಾಧನೆ ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ಸಂತಸ ಹೆಚ್ಚಿಸಿದೆ. ಇದಕ್ಕೆ ಎಲ್ಲ ಪ್ರಮುಖರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
- - - -4ಎಸ್‍ಜಿಆರ್1: ಸಾಗರದಲ್ಲಿ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಹಿರಿಯರಾದ ಕಾಗೋಡು ತಿಮ್ಮಪ್ಪ, ಹರನಾಥ ರಾವ್ ಅವರನ್ನು ಸನ್ಮಾನಿಸಲಾಯಿತು. -4ಎಸ್‍ಜಿಆರ್2: ಸಾಗರದ ಗಾಂಧಿ ಮೈದಾನದಲ್ಲಿ ನಾಗರಿಕ ಅಭಿನಂದನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಅರಣ್ಯಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.