ಕಲಬುರಗಿ ತೊಗರಿ ಬೆಳೆಗೆ ವಿಚಿತ್ರ ರೋಗ

| Published : Nov 23 2024, 12:34 AM IST

ಸಾರಾಂಶ

ಈ ಬಾರಿ ಉತ್ತಮ ಮಳೆ ಬಂದು ತೊಗರಿ ಬೆಳೆಯು ಸಹ ಚೆನ್ನಾಗಿತ್ತು. ಆದರೆ ಯಾವುದೋ ವಿಚಿತ್ರ ರೋಗ ಬಂದಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ವಿಚಿತ್ರ ರೋಗದ ಪತ್ತೆಗಾಗಿ ವಿಜ್ಞಾನಿಗಳ ತಂಡವು ಭೇಟಿ ನೀಡಲಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿಈ ಬಾರಿ ಉತ್ತಮ ಮಳೆ ಬಂದು ತೊಗರಿ ಬೆಳೆಯು ಸಹ ಚೆನ್ನಾಗಿತ್ತು. ಆದರೆ ಯಾವುದೋ ವಿಚಿತ್ರ ರೋಗ ಬಂದಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ವಿಚಿತ್ರ ರೋಗದ ಪತ್ತೆಗಾಗಿ ವಿಜ್ಞಾನಿಗಳ ತಂಡವು ಭೇಟಿ ನೀಡಲಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲ ದಿನಗಳಿಂದ ವಿಚಿತ್ರ ರೋಗದಿಂದ ತೊಗರಿ ನಾಶವಾಗುತ್ತಿದೆ. ಕೂಡಲೇ ಇದರ ಕುರಿತು ಸಂಶೋಧನೆಗೆ ಕೇಂದ್ರದಿಂದ ವಿಶೇಷ ವಿಜ್ಞಾನಿಗಳ ತಂಡ ಕಳುಹಿಸಬೇಕು ಎಂದು ಕೋರಿದ್ದು, ತಂಡವು ಭೇಟಿ ನೀಡಲಿದೆ ಎಂದರು.ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಆಳಂದ್ ತಾಲೂಕಿನಲ್ಲಿ ಬಹಳಷ್ಟು ತೊಗರಿ ಬೆಳೆ ನಾಶವಾಗುತ್ತಿದೆ. ಇಷ್ಟು ದಿನ ಚೆನ್ನಾಗಿದ್ದು ಈಗ ದಿಢೀರನೆ ಹಾನಿಯಾಗುತ್ತಿದೆ. ಎಂದೂ ಕಂಡಿಲ್ಲದ ರೋಗ ಬಂದಿದ್ದರಿಂದ ಈ ಸಲದ ತೊಗರಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಾಣುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.ನಾಲ್ಕು ಎಕರೆಯಲ್ಲಿ ತೊಗರಿ ಬೆಳೆ ಬಿತ್ತಿದ್ದ ರೈತನೋರ್ವ ತನ್ನ ಹೊಲದಲ್ಲೂ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ತಾನು ದಿಕ್ಕುತೋಚದೆ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ನನ್ನ ಮುಂದೆ ಅಳಲು ತೋಡಿಕೊಂಡಿದ್ದಾನೆ. ನಾನು ಆತನಿಗೆ ಸಮಾಧಾನ ಮಾಡಿದ್ದೇನೆ. ಈ ಕೂಡಲೇ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಅಗ್ರಹಿಸುವುದಾಗಿ ತಿಳಿಸಿದ್ದೇನೆಂದರು.

ಆಳಂದ್ ತಾಲೂಕಿನಲ್ಲಿ 2 ಲಕ್ಷ, 40 ಸಾವಿರ ಎಕರೆ ತೊಗರಿ ಬಿತ್ತನೆಯಾಗಿದೆ. ಹಲವೆಡೆ ಭೇಟಿ ನೀಡಿ, ತೊಗರಿ ವೀಕ್ಷಿಸಿದ್ದೇನೆ. ಬಳಿಕ ಈ ತೊಗರಿಯ ನಾಶ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದು ನೆಟೆ ರೋಗವೂ ಅಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಈ ವಿಚಿತ್ರ ರೋಗದ ಬಗ್ಗೆ ಶೋಧನೆಗೆ ಕೇಂದ್ರದಿಂದ ವಿಶೇಷ ವಿಜ್ಞಾನಿಗಳ ತಂಡ ಕಳುಹಿಸಬೇಕೆಂದು ಕೋರಿರುವೆ ಎಂದರು.

ಜಿಲ್ಲೆಯಲ್ಲಿ 15 ಲಕ್ಷ ಎಕರೆ ತೊಗರಿ ಬಿತ್ತನೆಯಾಗಿದ್ದು, ಅದರಲ್ಲಿ ತೊಗರಿಗೆ 1 ಲಕ್ಷ 70 ಸಾವಿರ ರೈತರು ತೊಗರಿಗೆ ವಿಮೆ ಮಾಡಿಸಿದ್ದಾರೆ. ಹಲವು ರೈತರು ವಿಮೆ ಸಹ ಮಾಡಿಕೊಂಡಿಲ್ಲ, ನೀರಾವರಿ, ಒಣಭೂಮಿಯಲ್ಲಿ ತೊಗರಿ ಒಣಗುತ್ತಿರುವುದರಿಂದ ರೈತರು ಭಾರೀ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಬೆಳಗಾವಿಯ ಅಧಿವೇಶನಕ್ಕಿಂತ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಗುರುಲಿಂಗಪ್ಪ ಜಂಗಮಶೆಟ್ಟಿ, ಬಸವರಾಜ್ ಉಪ್ಪಿನ್, ಶರಣಬಸಪ್ಪ ಪಾಟೀಲ್, ಸತೀಶ್ ಪಡಶೆಟ್ಟಿ, ನಾಗನಾಥ್ ಉಪಸ್ಥಿತರಿದ್ದರು.