ಕಲಬುರಗಿ : ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಕುರಿತ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಖರ್ಗೆ ಅವರ ಈ ಹೇಳಿಕೆ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ವೈಶಾಖ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಖರ್ಗೆ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲಗಳಿರುವುದು ನಿಜ. ರಾಜ್ಯದಲ್ಲಿ ಉದ್ಭವಿಸಿರುವ ಈ ನಾಯಕತ್ವ ಕುರಿತ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ, ಸದ್ಯಕ್ಕೆ ಸಿಎಂ ಬದಲಾವಣೆ ವಿಚಾರ ಬರೋದಿಲ್ಲ. ಸಿಎಂ ಬದಲಾವಣೆ ವಿಚಾರ ಬಂದರೆ ಆಗ ನಾವೆಲ್ಲ ಸೇರಿ, ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತೇವೆ. ಸಿಎಂ ಬದಲಾವಣೆಗೆ ಇನ್ನೂ ಸಮಯವಿದೆ. ಆ ಸಮಯ ಬಂದ ಮೇಲೆ ನೋಡೋಣ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆದರೆ ಉತ್ತಮ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಅವರು ಹೇಳುತ್ತಾರೆ, ನೀವೂ ಹೇಳುತ್ತೀರಿ, ಮೇಲಿನವರೂ (ಹೈಕಮಾಂಡ್) ಹೇಳುತ್ತಾರೆ. ಆದರೆ, ನಮ್ಮ ಹಣೆ ಬರಹ ಬೇಕಲ್ಲ. ಹಣೆ ಬರಹ ಎನ್ನುವುದಕ್ಕಿಂತ ಐಡಿಯಾಲಜಿ ಮುಖ್ಯ’ ಎಂದರು.
ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದುಕೊಂಡು ಬಂದಿದ್ದೇನೆ. ಹೀಗಾಗಿ, ಇಂತಹ ಪ್ರಮುಖ ನಿರ್ಧಾರಗಳಲ್ಲಿ ಸೋನಿಯಾ ಗಾಂಧಿ ಅವರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಇರುವುದರಿಂದ ಬದಲಾವಣೆ ಕುರಿತು ಚರ್ಚೆ ಇಲ್ಲ. ಆದರೆ, ಆ ವಿಚಾರ ಬಂದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇಂತಹ ಮಹತ್ವದ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ: ಡಿಕೆಶಿ
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾವುದೇ ವಿಚಾರದ ಬಗ್ಗೆಯಾದರೂ ಸರಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಅಧಿಕಾರ ಹಂಚಿಕೆ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನೀವು ಏನಿದ್ದರೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು.
ಮೇಲಿನವರೂ ನನಗೆ ಸಿಎಂ ಆಗಿ ಅಂತಾರೆ, ಹಣೆಬರಹ ಬೇಕಲ್ಲ: ಖರ್ಗೆ
ನಾನು ಮುಖ್ಯಮಂತ್ರಿಯಾಗಲಿ ಎಂದು ಮೇಲಿನವರೂ (ಹೈಕಮಾಂಡ್) ಹೇಳುತ್ತಾರೆ. ಆದರೆ ನಮ್ಮ ಹಣೆ ಬರಹ ಬೇಕಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಖರ್ಗೆ ಅವರು ಸಿಎಂ ಆದರೆ ಉತ್ತಮ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದುಕೊಂಡು ಬಂದಿದ್ದೇನೆ. ಹೀಗಾಗಿ, ಇಂತಹ ಪ್ರಮುಖ ನಿರ್ಧಾರಗಳಲ್ಲಿ ಸೋನಿಯಾ ಗಾಂಧಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಖರ್ಗೆ ಅವರು ಹಿರಿಯರು, ಸಿಎಂ ಆದರೆ ಸ್ವಾಗತ
ಖರ್ಗೆ ಅವರು ಹಿರಿಯರು, ಅವರ ಸಮಕಾಲೀನರೆಲ್ಲ ಮುಖ್ಯಮಂತ್ರಿ ಆಗಿದ್ದಾರೆ. ವೀರಪ್ಪ ಮೊಯ್ಲಿ, ಗುಂಡೂರಾವ್ ಎಲ್ಲರೂ ಮುಖ್ಯಮಂತ್ರಿ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಐವತ್ತು ವರ್ಷದ ಸಾಧನೆಯಲ್ಲಿ ಹೈಕಮಾಂಡ್ ಅವರಿಗೆ ಸ್ಥಾನ ಕೊಟ್ಟರೆ ತಪ್ಪೇನಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ.
- ಡಾ। ಜಿ. ಪರಮೇಶ್ವರ್, ಗೃಹ ಸಚಿವ
