ಸಾರಾಂಶ
ಒಂದೇ ವಾರದಲ್ಲಿ ಕಲಬುರಗಿಗೆ ಎರಡು ರೈಲು ಸಿಕ್ಕಂತಾಗಿದ್ದು, ಸಾಮಾನ್ಯ ವೇಗದೂತ ರೈಲಿನ ಜೊತೆಗೆ ಫೆ.12ರಿಂದ ವಂದೇ ಭಾರತ್ ಕೂಡ ಸಂಚಾರ ನಡೆಸಲಿದೆ.
ಕಲಬುರಗಿ: ಕಲಬುರಗಿ-ಬೆಂಗಳೂರು ನಡುವೆ ಇದೇ ಮಾ.12ರಿಂದ ಹೊಸ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ. ಪ್ರಧಾನಿ ಮೋದಿ ಈ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಆರನೇ ಒಂದೇ ಭಾರತ್ ರೈಲು ಸಿಕ್ಕಂತಾಗಿದೆ.
ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮನವಿಗೆ ಕೇಂದ್ರ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿ, ಈ ಭಾಗಕ್ಕೆ ವಂದೇ ಭಾರತ್ ರೈಲು ನೀಡಿದೆ.ಈ ಸಂಬಂಧ ಕನ್ನಡಪ್ರಭ ಜೊತೆ ಮಾತನಾಡಿದ ಸಂಸದ ಡಾ.ಉಮೇಶ ಜಾಧವ್, ಮಾ.12ರಂದು ಕಲಬುರಗಿ ರೈಲು ನಿಲ್ದಾಣದಿಂದ ವಂದೇ ಭಾರತ ರೈಲು ಉದ್ಘಾಟನೆಯಾಗಲಿದೆ. ಕಲಬುರಗಿ ಹಿರೇನಂದೂರ್ (ಬಿಪಿಸಿಎಲ್ ಡಿಪೋ) ನಲ್ಲಿ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗೂ ಒಪ್ಪಿಗೆ ದೊರಕಿದ್ದು ಇದಕ್ಕೂ ಪ್ರಧಾನಿ ಮೋದಿಯವರೇ ಚಾಲನೆ ನೀಡುತ್ತಿದ್ದಾರೆ ಎಂದು ಡಾ.ಜಾಧವ್ ಹೇಳಿದ್ದಾರೆ.
ಈಗಾಗಲೇ ಕಲಬುರಗಿ-ಬೆಂಗಳೂರು ನಡುವೆ ಮಾ.9ರಿಂದ ಹೊಸತೊಂದು ಎಕ್ಸ್‌ಪ್ರೆಸ್ ರೈಲು ಸಂಚಾರದ ಘೋಷಣೆಯನ್ನು ರೈಲ್ವೇ ಸಚಿವಾಲಯ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ವಂದೇ ಭಾರತ್ ರೈಲು ಘೋಷಣೆಯಾಗಿದೆ.