ಸಾರಾಂಶ
ಗದಗ: ಎತ್ತಣ ಮಾಮರ,ಎತ್ತಣ ಕೋಗಿಲೆ ಎಂಬಂತೆ ಗದುಗಿನ ಕಲಾಚೇತನ ಸಾಂಸ್ಕೃತಿಕ ಆಕಾಡೆಮಿಗೂ ನನಗೂ ಸುಮಧುರ ಬಾಂಧವ್ಯ ಏರ್ಪಟ್ಟಿದ್ದು, ಕಲಾಚೇತನ ಪ್ರಶಸ್ತಿಯಿಂದ ನನಗೆ ನವಚೈತನ್ಯ ದೊರೆತಂತಾಗಿದೆ ಎಂದು ಹೆಸರಾಂತ ಚಲನಚಿತ್ರ ನಟ ರಾಮಕೃಷ್ಣ ನೀರ್ನಳ್ಳಿ ಹೇಳಿದರು.
ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಕಲಾಚೇತನ ಸಾಂಸ್ಕೃತಿಕ ಆಕಾಡೆಮಿ ವತಿಯಿಂದ ಜರುಗಿದ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾಚೇತನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಪ್ರಧಾನಿ ಮೋದಿಯವರಿಂದ ಪ್ರಶಂಸೆಗೆ ಭಾಜನವಾದ ಈ ಸಂಸ್ಥೆಯಿಂದ ನಾನು ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆ ಎನಿಸುತ್ತಿದ್ದು, ನಾನು ಮೊದಲು ರಂಗಭೂಮಿ ತಾಲೀಮು ಆರಂಭಿಸಿದ ಗದಗ ನೆಲದಲ್ಲಿ ನನಗೆ ಪ್ರಶಸ್ತಿ ದೊರಕಿದ್ದು ವಿಶೇಷವಾಗಿದೆ. ಗದಗ ಜಿಲ್ಲೆ ಕಲೆಗೆ ಹೆಸರಾಗಿದ್ದು, ಇಲ್ಲಿನ ರಂಗಭೂಮಿ ಕಂಪನಿಗಳು ರಾಜ್ಯಾದ್ಯಂತ ಸಾವಿರಾರು ಕಲಾವಿದರನ್ನು ಬೆಳೆಸಿವೆ. ಸಂಗೀತ, ಸಾಹಿತ್ಯ, ಕ್ರೀಡೆ, ರಂಗಭೂಮಿ ಹೀಗೆ ಕಲೆಯ ಅನೇಕ ಪ್ರಕಾರಗಳಲ್ಲಿ ಗದುಗಿನ ಕೊಡುಗೆ ಅಪಾರವಾಗಿದ್ದು, ಮಲೆನಾಡಿನಿಂದ ಇಲ್ಲಿಗೆ ಬಂದು ಹೋಟೆಲ್ ಉದ್ಯಮಿಗಳಾಗಿ ಕಲಾಚೇತನ ಸಂಸ್ಥೆ ಕಟ್ಟಿ ಬೆಳೆಸಿದ ಕಾವೆಂಶ್ರೀಯವರ ಕಲಾಪ್ರೇಮ ಅಭಿನಂದನೀಯವಾಗಿದೆ ಎಂದರು.
ಡಾ. ಜಿ.ಬಿ. ಬಿಡಿನಹಾಳ ಮಾತನಾಡಿ, ಕಳೆದ ಮೂರು ದಶಕಗಳಿಂದ ಕಾವೆಂಶ್ರೀಯವರ ಜತೆ ನನ್ನ ಒಡನಾಟವಿದ್ದು, ಅವರ ಸಾಧನೆಯ ಹಾದಿ ಹತ್ತಿರದಿಂದ ಗಮನಿಸಿದ್ದೇನೆ.ವೈದ್ಯಕೀಯ ವೃತ್ತಿಯ ಜತೆ ಕೃಷಿ ಹಾಗೂ ಕ್ರೀಡೆಯಲ್ಲಿ ನನ್ನ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಮಾನವನಿಗೆ ಆರೋಗ್ಯವೇ ಶ್ರೇಷ್ಠ ಸಂಪತ್ತಾಗಿದ್ದು, ಪಾಶ್ಚಾತ್ಯ ಆಹಾರ ಕೈಬಿಟ್ಟು ನಮ್ಮ ಪಾರಂಪರಿಕ ಸಿರಿಧಾನ್ಯ ಬಳಕೆ ಮಾಡಬೇಕೇಂದು ಹೇಳಿದರು.ಈ ವೇಳೆ ನಟ ರಾಮಕೃಷ್ಣ ನೀರ್ನಳ್ಳಿ, ವೈದ್ಯ ಡಾ. ಜಿ.ಬಿ. ಬಿಡಿನಹಾಳ ಹಾಗೂ ಯಕ್ಷಗಾನ ಕಲಾವಿದ ರಾಘವೇಂದ್ರ ಮಯ್ಯ ಅವರಿಗೆ ಕಲಾಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿದರು.ಕಲಾಚೇತನ ಸಾಂಸ್ಕೃತಿಕ ಆಕಾಡೆಮಿ ಅಧ್ಯಕ್ಷ ಡಾ. ಕಾವೆಂಶ್ರೀ ಪ್ರಾಸ್ತಾವಿಕ ಮಾತನಾಡಿದರು. ಪ್ರಶಸ್ತಿ ಪ್ರದಾನದ ನಂತರ ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಕೀಚಕ ವಧೆ ಮತ್ತು ಭಾರತ ರತ್ನ ಯಕ್ಷಗಾನ ಕಾರ್ಯಕ್ರಮ ಜರುಗಿತು.
ಪ್ರಸಿದ್ಧ ತಾಳ ಮದ್ದಲೆ ಕಲಾವಿದ ಮೋಹನ ಭಾಸ್ಕರ ಹೆಗಡೆ, ರಾಘವೇಂದ್ರ ಬೆಟಕೊಪ್ಪ, ಮೃತ್ಯುಂಜಯ ಸಂಕೇಶ್ವರ, ವಿಶ್ವನಾಥ ನಾಲವಾಡದ, ಪ್ರಕಾಶ ಬೇಲಿ, ನರ್ಮದಾ ಭಟ್ ಸೇರಿದಂತೆ ಕಲಾಚೇತನದ ಸದಸ್ಯರು ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು.