ಅಡೆತಡೆಗಳ ನಡುವೆಯೂ ಸಂಚಾರದ ಕೊಂಡಿಯಾಗಿದ್ದ ಕಾಳಿ ಸೇತುವೆ

| Published : Aug 08 2024, 01:34 AM IST

ಸಾರಾಂಶ

ಕಾಳಿ ನದಿ ಸೇತುವೆಯನ್ನು 1984- 85ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ದೇವೇಗೌಡ ಉದ್ಘಾಟನೆ ನೆರವೇರಿಸಿದ್ದರು.

ಕಾರವಾರ: ಕಾಳಿ ನದಿ ಸೇತುವೆ ಶಿಲಾನ್ಯಾಸದಿಂದ ಹಿಡಿದು ಉದ್ಘಾಟನೆ ಹಾಗೂ ಈ ತನಕ ನಡೆದು ಬಂದ ದಾರಿ ಸುಗಮವೇನೂ ಅಲ್ಲ. ತೊಡಕುಗಳ ನಡುವೆಯೂ ವಾಹನಗಳು ಸಂಚರಿಸುತ್ತಿದ್ದ ಸೇತುವೆ ಈಗ ಕುಸಿದು ಬೀಳುವ ಮೂಲಕ ಬೆಚ್ಚಿ ಬೀಳಿಸಿದೆ. 1984- 85ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ದೇವೇಗೌಡ ಉದ್ಘಾಟನೆ ನೆರವೇರಿಸಿದ್ದರು. ರಾಜ್ಯ ಲೋಕೋಪಯೋಗಿ ಇಲಾಖೆಗೆ ಹೆದ್ದಾರಿ ವಿಭಾಗವು 1965ರಲ್ಲಿ ಈ ನಿರ್ಮಾಣ ಕೆಲಸ ವಹಿಸಿತ್ತು. ಆರಂಭದಲ್ಲಿ ₹1 ಕೋಟಿ ಟೆಂಡರ್‌ಗೆ ಗ್ಯಾನನ್ ಡಂಕರ್ಲಿ ಕಂಪನಿಗೆ ಕಾಮಗಾರಿ ವಹಿಸಲಾಗಿತ್ತು. ಸೇತುವೆ 1968ರ ಹೊತ್ತಿಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಅಡಿಪಾಯದ ಕೆಲಸ ಪ್ರಾರಂಭವಾದಾಗ ಆರ್ಥಿಕ ಸಮಸ್ಯೆ ಎದುರಾಯಿತು. ನಂತರ ಉದನಿ ಎಂಜಿನಿಯರಿಂಗ್ ಕಂಪನಿ ಟೆಂಡರ್ ಪಡೆಯುವವರೆಗೆ 4 ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.ಒಂದು ವರ್ಷದ ನಂತರ ಹೊಸದಾಗಿ ಟೆಂಡರ್‌ ಆಹ್ವಾನಿಸಿದಾಗ ಗ್ಯಾಮನ್ ಇಂಡಿಯಾ ಲಿಮಿಟೆಡ್ ಕಾಮಗಾರಿ ವಹಿಸಿಕೊಂಡು ₹1.4 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದೆ ಬಂದಿತ್ತು. ಗ್ಯಾಮನ್ 1975ರ ವೇಳೆಗೆ ಸೇತುವೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಕಂಪನಿಯೂ ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ 6 ವರ್ಷಗಳ ಅವದಿ ವಿಸ್ತರಣೆಯ ನಂತರವೂ ಸೇತುವೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.1982ರ ವೇಳೆಗೆ ಸೇತುವೆಯನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ತೀರ್ಮಾನಿಸಿದರೂ, 665.5 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕುವುದು ಸಮಸ್ಯೆಯಾಗಿತ್ತು. 80 ಅಡಿಗಳಷ್ಟು ಆಳಕ್ಕೆ ಬೆಡ್ ಹಾಕಲು ಒಪನ್‌- ಗ್ರಾಬಿಂಗ್ ವಿಧಾನ ಅಳವಡಿಸಲಾಯಿತು. ನಂತರ ನ್ಯೂಮ್ಯಾಟಿಕ್ ಸಿಂಕಿಂಗ್ ವಿಧಾನಕ್ಕೆ ಸೇತುವೆ ನಿರ್ಮಾಣ ಕಾರ್ಯ ಬದಲಾಯಿತು. ಈ ಕಾಮಗಾರಿ ವೇಳೆ ಅಂದು ಏಳು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು.

ಬಳಿಕ ಸಂಸ್ಥೆಯು ಹೆಚ್ಚುವರಿ ₹1.25 ಕೋಟಿಗೆ ಬೇಡಿಕೆಯಿಟ್ಟಿದ್ದು, ರಾಜ್ಯ ಸರ್ಕಾರ ಕೂಡಾ ಬೇಡಿಕೆಯನ್ನು ಪರಿಗಣಿಸಿತ್ತು. ಕೊನೆಗೂ ಈ ಸೇತುವೆ 1984- 85ರಲ್ಲಿ ಪೂರ್ಣಗೊಂಡು ಸಂಚಾರಕ್ಕೆ ತೆರೆದುಕೊಂಡಿತ್ತು.ಸೇತುವೆ ಉದ್ಘಾಟನೆಯಾದ ಬಳಿಕ ದುರಸ್ತಿ ಕಾರ್ಯ ನಡೆಸಬೇಕಾಯಿತು. ನಂತರ 2009ರಲ್ಲಿ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಬೇರಿಂಗ್ ಅಳವಡಿಕೆ ಕಾರ್ಯ ನಡೆಯಿತು. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 10 ವರ್ಷಗಳ ಹಿಂದೆ ಈ ಸೇತುವೆ ವಹಿಸಿಕೊಳ್ಳುವಾಗ ಮತ್ತೆ ದುರಸ್ತಿ ಮಾಡಿತ್ತು. ಕೊನೆಗೂ ಸೇತುವೆ ಈಗ ನೀರುಪಾಲಾಗಿದೆ.