ಸಾರಾಂಶ
ಉಗಮ ಶ್ರೀನಿವಾಸ್ ಕನ್ನಡಪ್ರಭ ವಾರ್ತೆ ತುಮಕೂರುಪ್ರಥಮ ಪೂಜೆ ಸಲ್ಲುವ ವಿಘ್ನ ನಿವಾರಕ ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ನಾಡಿನ ಜನತೆ ಸಜ್ಜಾಗಿರುವ ಬೆನ್ನಲ್ಲೆ ಮಾರುಕಟ್ಟೆಗೆ ಬಂದಿಳಿದಿರುವ ವಿಭಿನ್ನ ಅವತಾರದ ಬಹುರೂಪಿ ಗಣೇಶ ಮೂರ್ತಿಗಳು ಈ ಬಾರಿ ಬಲು ದುಬಾರಿಯಾಗಿವೆ.ದಿನ ಕಳೆದಂತೆ ವರ್ಷದಿಂದ ವರ್ಷಕ್ಕೆ ಗಣೇಶ ಮೂರ್ತಿಗಳ ಮಾರಾಟ ಪ್ರಮಾಣ ಹೆಚ್ಚಾಗುತ್ತಿದ್ದು, ಅದೇ ರೀತಿ ಬೆಲೆ ಏರಿಕೆಯೂ ಗಗನಕ್ಕೇರುತ್ತಿದೆ. ಎಂದಿಂಗಿಂತಲೂ ಈ ಬಾರಿ ಗೌರಿ-ಗಣೇಶ ಮೂರ್ತಿಗಳು ಹಾಗೂ ಹೂವು, ಹಣ್ಣುಗಳ ದರ ದುಪ್ಪಟವಾಗಿದೆ.ಹಾಗೆಯೇ 500 ರೂಪಾಯಿಂದ 50 ಸಾವಿರದ ವರೆಗೂ ಗಣೇಶಮೂರ್ತಿಗಳ ಮಾರಾಟ ನಡೆಯುತ್ತಿದೆ. ಕಳೆದ ವರ್ಷ 6500 ಸಾವಿರ ಇದ್ದ ಗಣೇಶ ಮೂರ್ತಿಯ ಬೆಲೆ ಈ ಬಾರಿ 8 ಸಾವಿರದಿಂದ 9 ಸಾವಿರಕ್ಕೆ ಏರಿಕೆಯಾಗಿದೆ. ಹಾಗೆಯೇ ಗೌರಿ ವಿಗ್ರಹದ ಬೆಲೆಯೂ ಏರಿಕೆಯಾಗಿದೆ.ಮಾರುಕಟ್ಟೆಯಲ್ಲಿ ಮುಂಬೈ ಮಾದರಿಯ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪೇಟ ತೊಟ್ಟಿರುವ ಗಣಪತಿ ವಿಗ್ರಹ, ಆಸ್ಥಾನದಲ್ಲಿ ಕುಳಿತ ಭಂಗಿಯ ಗಣೇಶ, ಕೈ ಎತ್ತಿ ನೃತ್ಯ ಮಾಡುವ ಗಣೇಶನ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ. 1 ಅಡಿ ಎತ್ತರದ ಗಣಪತಿ ಮೂರ್ತಿಯಿಂದ ಸುಮಾರು 10 ಅಡಿ ಎತ್ತರದ ವರೆಗೆ ವಿವಿಧ ಆಕಾರದ ವಿಭಿನ್ನ ಗಣೇಶ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ನಗರದ ಮಾರುಕಟ್ಟೆಯಿಂದ ಭಕ್ತರು ನಿರ್ಮಿಸಿರುವ ಪೆಂಡಾಲ್‌ಗಳಿಗೆ ಗಣೇಶ ಮೂರ್ತಿಗಳು ವಾಹನಗಳ ಮುಖೇನ ರವಾನೆಯಾಗುತ್ತಿವೆ.
ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತಗಳು ಪಿಓಪಿ ಗಣೇಶ ಮಾರಾಟ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಖರೀದಿಯಲ್ಲಿ ಜನ ನಿರತರಾಗಿರುವುದು ಕಂಡು ಬರುತ್ತಿದೆ. ಪಿಒಪಿ ಗಣಪತಿಗಳಿಗೆ ಗುಡ್ ಬೈ, ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಜೈ ಎಂಬ ಜೈಕಾರಗಳೊಂದಿಗೆ ಯುವಕರ ದಂಡು ತಮ್ಮ ತಮ್ಮ ಊರುಗಳಿಗೆ ಗಣೇಶಮೂರ್ತಿಗಳನ್ನು ಕೊಂಡೊಯ್ಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.ನಗರದ ಅಶೋಕ ರಸ್ತೆ, ಟೌನ್‌ಹಾಲ್ ವೃತ್ತ, ಬಿ.ಎಚ್. ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ಕೃಷ್ಣ, ಬಾಹುಬಲಿ ಸೇರಿದಂತೆ ವಿವಿಧ ರೂಪದ ಬೃಹದಾಕಾರದ ಗಣೇಶ ಮೂರ್ತಿಗಳ ಖರೀದಿಗೆ ಭಕ್ತರು ಒಲವು ತೋರುತ್ತಿರುವುದು ವಿಶೇಷವಾಗಿದೆ. ಚಿತ್ತಾಕರ್ಷಕ ಬಣ್ಣಗಳ ಲೇಪನ ಮಾಡಿರುವ ಪರಿಸರ ಸ್ನೇಹಿ ಗಣಪಗಳ ಖರೀದಿಸುವ ಮೂಲಕ ಭಕ್ತರು ಪರಿಸರ ರಕ್ಷಣೆ ಬಗ್ಗೆ ಬದ್ಧತೆ ತೋರಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸರ್ಕಾರಗಳ ಮಾರ್ಗಸೂಚಿಯನ್ವಯ ನಾವೆಲ್ಲಾ ಮಣ್ಣಿನಿಂದೇ ಪರಿಸರ ಸ್ನೇಹಿ ಗೌರಿ-ಗಣೇಶ ವಿಗ್ರಹಗಳನ್ನು ತಯಾರಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಪಿಓಪಿ ಗಣೇಶ ಮೂರ್ತಿಗಳ ತಯಾರಿ ಮಾಡಿಲ್ಲ, ಇನ್ನು ಮುಂದೆ ಮಾಡುವುದೂ ಇಲ್ಲ. ನಮಗೆ ಈ ಹಬ್ಬ ಬಂದಾಗ ಸುಮಾರು 70 ರಿಂದ 1 ಲಕ್ಷ ರೂ.ವರೆಗೆ ಗೌರಿ-ಗಣೇಶ ವಿಗ್ರಹಗಳ ತಯಾರಿಗೆ ಖರ್ಚಾಗುತ್ತದೆ ಎನ್ನುತ್ತಾರೆ ತಿಪಟೂರು ತಾಲೂಕಿನ ಬಿಳಿಗೆರೆಯ ಗಣೇಶ ವಿಗ್ರಹ ಮಾರಾಟಗಾರರು. ಮೊರಗಳ ಮಾರಾಟ ಭರಾಟೆ...ಗೌರಿಯನ್ನು ಪೂಜಿಸುವ ಪ್ರತಿಯೊಬ್ಬರು ಬಾಗಿನವನ್ನು ಕೊಡುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಮೊರಗಳ ಮಾರಾಟ ಭರಾಟೆಯೂ ಬಲು ಜೋರಾಗಿದೆ ನಗರದ ಕೋತಿತೋಪು ರಸ್ತೆ, ಚರ್ಚ್ ಸರ್ಕಲ್ ರಸ್ತೆ, ಚಿಕ್ಕಪೇಟೆ, ಎಸ್.ಎಸ್.ಪುರಂ, ಎಸ್‌ಐಟಿ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಮೊರಗಳ ಮಾರಾಟ ಭರ್ಜರಿಯಾಗಿದೆ. ಅಲ್ಲದೆ ಗ್ರಂಧಿಗೆ ಅಂಗಡಿಗಳಲ್ಲೂ ಮೊರಗಳ ಮಾರಾಟದ್ದೇ ಕಾರುಬಾರು. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಖರೀದಿಯಂತೂ ಕಡಿಮೆಯಾಗಿಲ್ಲ. ನಗರದ ಎಲ್ಲ ರಸ್ತೆಗಳಲ್ಲೂ ಹೂ, ಹಣ್ಣು, ಬಾಳೆಕಂದು, ಮಾವಿನ ಸೊಪ್ಪಿನ ಮಾರಾಟ ಭರದಿಂದ ಸಾಗಿದೆ.