ಹೊಸ ವರ್ಷದಲ್ಲಿ ಮತ್ತಷ್ಟು ನಿರೀಕ್ಷೆಯಲ್ಲಿ ಕಲ್ಪತರು ತುಮಕೂರು ಜಿಲ್ಲೆ

| Published : Jan 01 2025, 12:00 AM IST

ಹೊಸ ವರ್ಷದಲ್ಲಿ ಮತ್ತಷ್ಟು ನಿರೀಕ್ಷೆಯಲ್ಲಿ ಕಲ್ಪತರು ತುಮಕೂರು ಜಿಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮೀಜಿಯೊಬ್ಬರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಮೇಲೆ ಜೈಲು ಸೇರಿದ ಕಹಿ ಘಟನೆಯೂ ಕೂಡ ನಡೆಯಿತು. ಹಾಗೆಯೇ ತುಮಕೂರು ಬಳಿಯ ಕುಚ್ಚಂಗಿಯಲ್ಲಿ ಕಾರೊಂದರಲ್ಲಿ ಮೂವರ ಮೃತದೇಹ ಪತ್ತೆಯಾಗಿದ್ದವು. ಮೂಲತಃ ಮಂಗಳೂರಿನ ಕಡೆಯುವರಾದ ಇವರನ್ನು ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿತ್ತು. ಮಧುಗಿರಿ ತಾಲೂಕಿನಲ್ಲಿ ಕಲೂಷಿತ ನೀರು ಸೇವಿಸಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದಾರುಣ ಘಟನೆಯೂ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಸೋಲು, ಗೆಲುವು, ಸಿಹಿ- ಕಹಿಗಳ ನಡುವೆ 2024ಕ್ಕೆ ವಿದಾಯ ಹೇಳಿದ್ದು, 2025ರಿಂದ ಕಲ್ಪತರು ಜಿಲ್ಲೆಯಾದ ತುಮಕೂರಿಗೆ ಹೊಸ ಹೊಸ ಶುಭ ಸಮಾಚಾರಗಳು ಸಿಗಲಿ ಎಂಬ ಆಶಯ ಜಿಲ್ಲೆಯ ಜನರದ್ದಾಗಿದೆ.

ಕಳೆದ ವರ್ಷ ಒಂದರ್ಥದಲ್ಲಿ ಬಂಪರ್. ಕಾರಣವಿಷ್ಟೇ, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಒಂದು ಮುಕ್ಕಾಲು ಲಕ್ಷ ಮತಗಳಿಂದ ಗೆದ್ದ ವಿ. ಸೋಮಣ್ಣ ಅವರಿಗೆ ಕೇಂದ್ರ ರೈಲ್ವೆ ಸಚಿವ ಸ್ಥಾನ ದೊರೆಯಿತು. ಜಿಲ್ಲೆಯಿಂದ ಆಯ್ಕೆಯಾದ ಸಂಸದರೊಬ್ಬರಿಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯುವಂತಾಯಿತು. ತುಮಕೂರು- ರಾಯದುರ್ಗ ರೈಲು ಮಾರ್ಗ, ತುಮಕೂರು- ದಾವಣಗೆರೆ ಮಾರ್ಗಕ್ಕೆ ಸೋಮಣ್ಣ ಅವರಿಗೆ ರೈಲ್ವೆ ಖಾತೆ ದೊರೆತಿದ್ದರಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗಳಿಗೆ ಮತ್ತೆ ಚಾಲನೆ ಸಿಗುವಂತಾಯಿತು. ತುಮಕೂರು, ತಿಪಟೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆಗಳು ಕೂಡ ಸಾಕಾರಗೊಳ್ಳುವ ಹಂತಕ್ಕೆ ಬಂದಿವೆ. ಹಾಗೆಯೇ ತುಮಕೂರು- ಯಶವಂತಪುರ ಎಲೆಕ್ಟ್ರಿಕ್ ಮೆಮೋ ರೈಲಿಗೆ ಚಾಲನೆ ಸಿಗುವಂತಾಯಿತು. ಫೆಬ್ರವರಿ ತಿಂಗಳಿನಲ್ಲಿ ಹೆಸರಾಂತ ಕವಿ ಕವಿತಾ ಕೃಷ್ಣ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ತುಮಕೂರು ಜಿಲ್ಲೆಗೆ ಅತ್ಯಂತ ನೋವು ತರುವ ಸಂಗತಿಯಾಯಿತು. 100ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದ ಹಾಗೂ ಕವಿತಾ ಕೃಷ್ಣ ಸಾಹಿತ್ಯ ಮಂದಿರದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಕವಿತಾ ಕೃಷ್ಣ ಅವರು ರೂಪಿಸಿದ್ದರು.

ಇನ್ನು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ಜಿಲ್ಲೆಯಲ್ಲಿ ಬಹು ದೊಡ್ಡ ಪ್ರತಿರೋಧ ಉಂಟಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಸುರೇಶಗೌಡ, ಜ್ಯೋತಿ ಗಣೇಶ್, ಎಂ.ಟಿ. ಕೃಷ್ಣಪ್ಪ ಮತ್ತಿತರರೊಂದಿಗೆ ದೊಡ್ಡ ಹೋರಾಟ ರೂಪುಗೊಂಡಿತು. ಈಗಲೂ ಕೂಡ ಹೋರಾಟದ ಕಾವು ಕಡಿಮೆಯಾಗಿಲ್ಲ.

ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ತುಮಕೂರಿನ ಮೈದಾಳ ಕೆರೆಯಲ್ಲಿ ಸೆಲ್ಫಿ ತೆಗೆಯುವಾಗ ಆಕಸ್ಮಿಕವಾಗಿ ಯುವತಿಯೊಬ್ಬಳು ಕಾಲು ಜಾರಿ ಕೆರೆಗೆ ಬಿದ್ದು ಕೊಚ್ಚಿ ಹೋದಳು. ಆಶ್ಚರ್ಯಕರವಾಗಿ ಬಂಡೆಯ ಮಧ್ಯೆ ಸಿಲುಕಿಕೊಂಡಿದ್ದ ಈಕೆ ಇಡೀ ರಾತ್ರಿ ಅಲ್ಲೇ ಕಳೆದಳು. ಮರು ದಿವಸ ಬೆಳಗ್ಗೆ ಆಕೆ ಜೀವಂತವಾಗಿ ಪತ್ತೆಯಾಗುವ ಮೂಲಕ ಈ ಘಟನೆ ರಾಜ್ಯದ ಗಮನಸೆಳೆಯಿತು.

ಇನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ವಿವಿಧ ಅಕಾಡೆಮಿಗಳಿಗೆ 14ಕ್ಕೂ ಹೆಚ್ಚು ಮಂದಿ ಸದಸ್ಯರಾಗುವ ಮೂಲಕ ಗಮನಸೆಳೆದರು. ಹಾಗೆಯೇ ಸಾಹಿತ್ಯ ಅಕಾಡೆಮಿಗೆ ಜಿಲ್ಲೆಯವರೇ ಆದ ಮುಕುಂದರಾಜ್ ಅಧ್ಯಕ್ಷರಾಗಿ ಗಮನ ಸೆಳೆದರು.

ಸ್ವಾಮೀಜಿಯೊಬ್ಬರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಮೇಲೆ ಜೈಲು ಸೇರಿದ ಕಹಿ ಘಟನೆಯೂ ಕೂಡ ನಡೆಯಿತು. ಹಾಗೆಯೇ ತುಮಕೂರು ಬಳಿಯ ಕುಚ್ಚಂಗಿಯಲ್ಲಿ ಕಾರೊಂದರಲ್ಲಿ ಮೂವರ ಮೃತದೇಹ ಪತ್ತೆಯಾಗಿದ್ದವು. ಮೂಲತಃ ಮಂಗಳೂರಿನ ಕಡೆಯುವರಾದ ಇವರನ್ನು ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿತ್ತು. ಮಧುಗಿರಿ ತಾಲೂಕಿನಲ್ಲಿ ಕಲೂಷಿತ ನೀರು ಸೇವಿಸಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದಾರುಣ ಘಟನೆಯೂ ನಡೆಯಿತು.

ಈ ಬಾರಿ ಅತ್ಯಂತ ಹೆಚ್ಚು ಗಮನ ಸೆಳೆದಿದ್ದು ಮೈಸೂರು ಮಾದರಿಯಲ್ಲಿ ತುಮಕೂರು ದಸರಾ ನಡೆಸಿದ್ದು. ಮೈಸೂರು ದಸರಾ ಮಾದರಿಯಲ್ಲಿ ಜಂಬೂಸವಾರಿ ಮಾಡಲಾಗಿತ್ತು. ಒಂದು ವಾರಗಳ ಕಾಲ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎರಡು ದಿವಸಗಳ ಕಾಲ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮನರಂಜನೆ ಕಾರ್ಯಕ್ರಮಗಳು ನಡೆದವು. ಲಕ್ಷಾಂತರ ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಳೆದ ವರ್ಷ ಖುಷಿ ಮತ್ತು ದುಃಖ ಎರಡೂ ಸಮಾನವಾಗಿತ್ತು. ಹೊಸ ವರ್ಷ 2025ರಲ್ಲಿ ಕನಸುಗಳು ನನಸಾಗಿ ಹೆಚ್ಚೆಚ್ಚು ಸಿಹಿಯ ಸಮಾಚಾರಗಳೇ ಬರಲಿ ಎಂಬ ಆಶಯವನ್ನು ಜಿಲ್ಲೆಯ ಜನರು ಹೊಂದಿದ್ದಾರೆ.