ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್ ) ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಅಖಾಡಕ್ಕೆ ಕಮಲ ಪಡೆ ನಾಯಕರು ಧುಮುಕಿದ್ದಾರೆ.ಪ್ರಮುಖ ನಾಯಕರು ರೈತರ ಕೃಷಿ ತೋಟಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರಲ್ಲದೆ, ರೈತರ ಅಹವಾಲು ಕೂಡ ಆಲಿಸಿದರು.

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್ ) ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಅಖಾಡಕ್ಕೆ ಕಮಲ ಪಡೆ ನಾಯಕರು ಧುಮುಕಿದ್ದಾರೆ.

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.‌ ಅಶೋಕ್‌, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೇರಿದಂತೆ ಪ್ರಮುಖ ನಾಯಕರು ರೈತರ ಕೃಷಿ ತೋಟಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರಲ್ಲದೆ, ರೈತರ ಅಹವಾಲು ಕೂಡ ಆಲಿಸಿದರು.

ಬಿಜೆಪಿ ನಾಯಕರ ನಿಯೋಗ ಭೇಟಿ

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು , ಬನ್ನಿಗಿರಿ ಹಳ್ಳಿಗಳಿಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿತು. ಆನಂತರ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ನಾಯಕರನ್ನು ಹೀಯಾಳಿಸುವ ವ್ಯಂಗ್ಯಭರಿತ ಪೋಸ್ಟರ್ :

ಈ ಮಧ್ಯೆ ಬಿಜೆಪಿ ನಾಯಕರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರನ್ನು ವ್ಯಂಗ್ಯಮಾಡಿರುವ ಪೋಸ್ಟರ್‌ಗಳು ರಸ್ತೆಗಳಲ್ಲಿ ರಾರಾಜಿಸುತ್ತಿದ್ದವು. ಬಿಡದಿಗೆ ತೆರಳುವ ರಸ್ತೆ ಮತ್ತು ಬ್ರಿಡ್ಜ್‌ ಗೋಡೆಗಳ ಮೇಲೆ ಈ ವ್ಯಂಗ್ಯಭರಿತ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ವಿಪಕ್ಷ ನಾಯಕರ ಭೇಟಿಗೂ ಮೊದಲೇ ಅವರನ್ನು ಹೀಯಾಳಿಸುವ ಪ್ರಯತ್ನ ಮಾಡಲಾಗಿದೆ. ಇದರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದರು.