ಸಾರಾಂಶ
ಗಾಂಧಿ ಬಳಗ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸಂಸದ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮಹಾತ್ಮಾ ಗಾಂಧೀಜಿ ಅವರ ತತ್ವದಲ್ಲಿಯೇ ಹೆಜ್ಜೆ ಹಾಕುತ್ತಿರುವ ಕಾಮನೂರು ಗ್ರಾಮ ಮಾದರಿಯಾಗಿದ್ದು, ಇದನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದತ್ತು ಪಡೆದು, ಅಭಿವೃದ್ಧಿಪಡಿಸುವುದಾಗಿ ಸಂಸದ ರಾಜಶೇಖರ ಹಿಟ್ನಾಳ ಭರವಸೆ ನೀಡಿದರು.ಕಾಮನೂರು ಗ್ರಾಮಕ್ಕೆ ಗಾಂಧಿ ಬಳಗ ಮತ್ತು ಶಿಕ್ಷಕರ ಕಲಾ ಸಂಘ ಹಮ್ಮಿಕೊಂಡಿದ್ದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿದರು. ಕಾಮನೂರು ಗ್ರಾಮದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದನ್ನು ಗಮನಿಸಿದ್ದೇನೆ. ಬಿಡುವು ಮಾಡಿಕೊಂಡು ನಾನು ಸಹ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಅದನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ನಗರದ ಅಶೋಕ ವೃತ್ತದಿಂದ ಕಾಮನೂರ ಗ್ರಾಮಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ನಸುಕಿನ ಜಾವ 5.40ಕ್ಕೆ ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ, ತಹಶೀಲ್ದಾರ ವಿಠ್ಠಲ್ ಚೌಗಲಾ ಅಶೋಕ ವೃತ್ತದಲ್ಲಿ ರಘುಪತಿ ರಾಘವ ಭಜನ್ ನಂತರ, ಪಾದಯಾತ್ರೆಗಳಿಗೆ ಚಾಲನೆ ನೀಡಿದರು.ಪಾದಯಾತ್ರೆ ಉದ್ದಕ್ಕೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೀ ಜೈ, ಶಾಂತಿ ಶಿಸ್ತು, ಲಾಲ್ ಬಹದ್ದೂರ ಶಾಸ್ತ್ರೀ ಜೀ ಕೀ ಜೈ ಅಂತ ಘೋಷಣೆ ಹಾಕುತ್ತ ಸಾಗಿದರು.
ಪಾದಯಾತ್ರೆ ಮೂಲಕ ತೆರಳಿದ ಪಾದಯಾತ್ರಿಗಳು, ಕಾಮನೂರ ಗ್ರಾಮದ ಕಟ್ಟೆ ತಲುಪುತ್ತಿದ್ದಂತೆ ಪ್ರತಿಯೊಬ್ಬ ಪಾದಯಾತ್ರೆಗೂ ನೂಲಿನ ಹಾರಹಾಕಿ, ಪಾದಯಾತ್ರೆಗಳ ಮೇಲೆ ಹೂವಿನ ಪಕಳೆಗಳನ್ನು ಹಾಕಿ ಕಾಮನೂರಿನ ಗ್ರಾಮಸ್ಥರು ಸ್ವಾಗತಿಸಿದರು. ಪಾದಯಾತ್ರೆ ತಂಡವನ್ನು ಇಡೀ ಗ್ರಾಮದ ಸುತ್ತಲೂ ಪಾದಯಾತ್ರೆಗಳಿಗೆ ಹೂವಿನ ಪಕಳೆಗಳನ್ನು ಹಾಕುತ್ತ ಹೆಜ್ಜೆ ಹಾಕಿದರು.ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಗಾಂಧಿ ಚಿಂತನಾ ಸಭೆಯಲ್ಲಿ ಪಾಲ್ಗೊಂಡರು. ಚಿಂತನಾ ಸಭೆಯಲ್ಲಿ ಇಡೀ ಗ್ರಾಮದ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಡಾ. ಪ್ರಭುರಾಜ ನಾಯಕ ಮಾತನಾಡಿ, ಇಲ್ಲಿನ ಜನರು ಗಾಂಧೀಜಿ ತತ್ವಗಳನ್ನು ತಮಗೆ ಅರಿವಿಲ್ಲದಂತೆ ಈವರೆಗೂ ಆಚರಿಸಿಕೊಂಡು ಬಂದಿದ್ದಾರೆ. ಈ ಕೆಲಸವನ್ನು ಮುಂದಿನ ತೆಲೆಮಾರಿಗೆ ವರ್ಗಾಯಿಸುವ ಹೊಣೆಗಾರಿಕೆ ಗ್ರಾಮದ ಯುವಕರ ಮೇಲಿದೆ ಎಂದರು.ಗ್ರಾಪಂ ಸದಸ್ಯರಾದ ಮಲ್ಲಪ್ಪ ತುಬಾಕಿ, ಪ್ರಮುಖರಾದ ಬಸವರಾಜ ಸವಡಿ, ಆನಂದತೀರ್ಥ ಪ್ಯಾಟಿ, ನಾಗರಾಜ ಜುಮ್ಮನವರ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಕಾಮನೂರು ಗ್ರಾಮಕ್ಕೆ ಆಗಮಿಸಿ, ಕೆಲಹೊತ್ತು ಗ್ರಾಮದ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರ ಕಲಾಸಂಘ ಕೊಪ್ಪಳ, ಕರ್ನಾಟಕ ಸರ್ವೋದಯ ಮಂಡಲ ಕೊಪ್ಪಳ, ಕಲರವ ಶಿಕ್ಷಕರ ಸೇವಾ ಬಳಗ, ಗಾಂಧಿ ವಿಚಾರ ವೇದಿಕೆ, ಪತಂಜಲಿ ಯೋಗ ಸಮಿತಿ, ಅಶೋಕ ಸರ್ಕಲ್ ನಾಟಕ ತಂಡ ಕೊಪ್ಪಳ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.