ಮೂಲ್ಕಿ

ತುಳುನಾಡಿನಲ್ಲಿ ಕಂಬಳ ಕ್ರೀಡೆಗೆ ವಿಶೇಷತೆಯಿದ್ದು, ಕೋಣದ ಮಾಲೀಕರು ಕೋಣಗಳನ್ನು ಮಕ್ಕಳಂತೆ ಪ್ರೀತಿಸಿ ಸಲಹುತ್ತಾರೆ. ಕಂಬಳದಲ್ಲಿ ಕೋಣಗಳ ಜೊತೆಗೆ ಪ್ರೇಕ್ಷಕರಿಗೆ ಕೂಡ ಮಹತ್ವವಿದ್ದು, ಎಲ್ಲರೂ ಜೊತೆಗೂಡಿ ಕಂಬಳವನ್ನು ಪ್ರೋತ್ಸಾಹಿಸಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಅಧ್ಯಕ್ಷತೆಯಲ್ಲಿ ಗುರುಪುರ ಮಾಣಿಬೆಟ್ಟುಗುತ್ತಿನಲ್ಲಿ ಆರಂಭಗೊಂಡ 3ನೇ ವರ್ಷದ ಮೂಳೂರು-ಅಡ್ಡೂರು ಜೋಡುಕರೆ ಗುರುಪುರ ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು. ಇನಾಯತ್ ಅಲಿ ಅವರು ಎಲ್ಲ ಸಮಾಜಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಹೃದಯ ಶ್ರೀಮಂತ ವ್ಯಕ್ತಿಯಾಗಿದ್ದು, ಕಂಬಳದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್‍ಯಕ್ರಮ ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಅವರು ಮಾತನಾಡಿ, ಇನಾಯತ್ ಅಲಿ ನೇತೃತ್ವದಲ್ಲಿ ಗುರುಪುರದಲ್ಲಿ ನಡೆಯುತ್ತಿರುವ 3ನೇ ವರ್ಷದ ಕಂಬಳವು ಎಲ್ಲ ಕಂಬಳಗಳಿಗಿಂತಲೂ ವಿಭಿನ್ನವಾಗಿ ವಿಶಿಷ್ಟವಾಗಿದ್ದು, ಕಂಬಳ ತುಳುವರ ಕೂಡುಕಟ್ಟು, ಸಂಸ್ಕೃತಿ. ಹಿರಿಯ, ಕಿರಿಯ, ಬಡವ, ಸಿರಿವಂತ, ಜಾತಿ, ಧರ್ಮಗಳ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವುದೇ ಕಂಬಳ ಎಂದು ಹೇಳಿದರು.

ಸಭಾ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಇನಾಯತ್ ಅಲಿ ಮಾತನಾಡಿ, ಇಲ್ಲಿನ ಜನರ ಪ್ರೀತಿ ವಿಶ್ವಾಸದಿಂದ 3ನೇ ವರ್ಷದಲ್ಲಿ ಕಂಬಳವು ಯಶಸ್ವಿಯಾಗಿ ನಡೆಯುತ್ತಿದೆ. ಅವರಿಗೆ ಸದಾ ಚಿರಋುಣಿಯಾಗಿದ್ದೇನೆ ಎಂದು ಹೇಳಿದರು. ಈ ಸಂದರ್ಭ ಸಹಾಯ ಹಸ್ತ ಕಾರ್‍ಯಕ್ರಮದಲ್ಲಿ ಅಶಕ್ತ ಕುಟುಂಬಗಳಿಗೆ ಸಹಾಯ, ವಿವಾಹ, ಮನೆ ನಿರ್ಮಾಣ ಸೇರಿದಂತೆ ಸಮಾಜಮುಖಿ ಕಾರ್‍ಯಗಳಿಗಾಗಿ 25 ಲಕ್ಷ ರು. ಮೊತ್ತದ ಧನ ಸಹಾಯ ಹಸ್ತಾಂತರಿಸಲಾಯಿತು.


ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳಾದ ಜಿ.ಟಿ. ವಾಸುದೇವ ಭಟ್, ಜಿಲ್ಲಾ ಕಂಬಳ ಸಮಿತಿ ಕಾರ್‍ಯಾಧ್ಯಕ್ಷ ಗುಣಪಾಲ ಕಡಂಬ, ಮಾಣೂರು ಸುಬ್ರಾಯ ದೇವಸ್ಥಾನದ ಅಧ್ಯಕ್ಷ ಶಶಿಧರ್ ಭಟ್ ಬೊಳ್ಳಾರುಗುತ್ತು. ಗೋಳಿದಡಿ ಗುತ್ತು ಗಡಿಕಾರರಾದ ವರ್ಧಮಾನ್ ಶೆಟ್ಟಿ, ಕೊಡೆತ್ತೂರು ಗುತ್ತಿನ ಗುತ್ತಿನಾರ್ ನಿತಿನ್ ಶೆಟ್ಟಿ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆ‌ರ್. ಪೂಜಾರಿ, ರವೀಶ್‌ ಶೆಟ್ಟಿ ನಿಟ್ಟೆಗುತ್ತು, ಗುರುಪುರ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪಾಂಡುರಂಗ ಕಾಮತ್, ಅದ್ಯಪಾಡಿ ದೈವಂಗಲಗುಡ್ಡೆ ನೀಲಕಂಠ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇ

ಸರ ಮಂಜುನಾಥ ಭಂಡಾರಿ, ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ, ಚಂದ್ರಹಾಸ ಪೂಜಾರಿ, ತನಿಯಪ್ಪ ಪೂಜಾರಿ, ಸುಧೀರ್‌ ಪಕ್ಕಳ, ಪುರುಷೋತ್ತಮ ಚಿತ್ರಾಪುರ, ಎಂ.ಜೆ. ಹೆಗಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಶಿವರಾಮ ಮಲ್ಲಿ, ರಾಜ್ಯ ಪರಿಸರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್‍ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟು ಗುತ್ತು, ಪ್ರಧಾನ ಕಾರ್‍ಯದರ್ಶಿ ಯಶವಂತ ಕುಮಾ‌ರ್ ಶೆಟ್ಟಿ ಬೆಳ್ಳೂರು ಗುತ್ತು ಉಪಸ್ಥಿತರಿದ್ದರು.

ಗುರುಪುರ ಕಂಬಳ ಸಮಿತಿ ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲು ಗುತ್ತು ಸ್ವಾಗತಿಸಿದರು. ವಿಜೇತ್ ಶೆಟ್ಟಿ ಮಂಜನಾಡಿ, ಮನೋಜ್ ವಾಮಂಜೂರು ನಿರೂಪಿಸಿದರು.