ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ನಡೆಯಲಿದೆ ಕಂಬಳ

| Published : Aug 30 2024, 01:01 AM IST

ಸಾರಾಂಶ

ಪಿಲಿಕುಳದಲ್ಲಿ ತುಳುನಾಡಿನ ಕಂಬಳ ಸೇರಿದಂತೆ ತುಳು ಸಂಸ್ಕೃತಿ, ಆಚಾರ ವಿಚಾರ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನೊಂಡ ಪಿಲಿಕುಳೋತ್ಸವ ನಡೆಸುವಂತೆ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪಿಲಿಕುಳ ನಿಸರ್ಗಧಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ ತಿಂಗಳಲ್ಲಿ ಕಂಬಳ ಸೇರಿದಂತೆ ‘ತುಳು ಉತ್ಸವ’ ನಡೆಯಲು ತೀರ್ಮಾನಿಸಲಾಗಿದೆ. ದಿನಾಂಕ ಇನ್ನಷ್ಟೇ ನಿಗದಿ ಮಾಡಬೇಕಿದೆ.ಈ ಕುರಿತು ಮುತುವರ್ಜಿ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪಿಲಿಕುಳಕ್ಕೆ ಭೇಟಿ ನೀಡಿ, ಸಂಬಂಧಿತರೊಂದಿಗೆ ಚರ್ಚಿಸಿದ್ದಾರೆ.

ಪಿಲಿಕುಳದಲ್ಲಿ ತುಳುನಾಡಿನ ಕಂಬಳ ಸೇರಿದಂತೆ ತುಳು ಸಂಸ್ಕೃತಿ, ಆಚಾರ ವಿಚಾರ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನೊಂಡ ಪಿಲಿಕುಳೋತ್ಸವ ನಡೆಸುವಂತೆ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ನಡೆದಿದೆ.

ಪಿಲಿಕುಳದಲ್ಲಿ ಸ್ಥಳ ಪರಿಶೀಲನೆ ಸಂದರ್ಭ ಮುಡಾ ಆಯುಕ್ತ ನೂರ್‌ಜಹಾನ್‌, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್‌ ಆಳ್ವ, ದ.ಕ. ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ, ತೀರ್ಪುಗಾರರಾದ ವಿಜಯ ಕುಮಾರ್‌ ಕಂಗಿನಮನೆ, ನವೀನ್‌ ಅಂಬೂರಿ ಇದ್ದು ಚರ್ಚೆ ನಡೆಸಿದರು.

ಪಿಲಿಕುಳದಲ್ಲಿ ಕಂಬಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ತುಳು ಉತ್ಸವದ ರೀತಿಯಲ್ಲಿ ಆಯೋಜಿಸಲು ಸಿದ್ಧತೆ ಮಾಡಲಾಗಿದೆ. ನವೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲಿ ಕಾರ್ಯಕ್ರಮದ ರೂಪುರೇಷೆ ಮತ್ತು ದಿನಾಂಕವನ್ನು ತಿಳಿಸಲಾಗುವುದು.

- ಮುಲ್ಲೈ ಮುಗಿಲನ್‌ ಎಂ.ಪಿ., ಜಿಲ್ಲಾಧಿಕಾರಿ