ಸಾರಾಂಶ
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸಂತಶ್ರೇಷ್ಠ ಕನಕದಾಸರ ೫೧೪ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ದಾಸ ಸಾಹಿತ್ಯದಲ್ಲಿ ಮೈಲುಗಲ್ಲು ಸಾಧಿಸಿದ ಕನಕದಾಸರು, ಭಕ್ತಿ ಮಾರ್ಗದಲ್ಲಿ ಮೋಕ್ಷದ ಹಾದಿಯನ್ನು, ಸಮಾನತೆ ಮತ್ತು ಸತ್ಯದ ಸಂದೇಶವನ್ನು ಕೀರ್ತನೆಗಳ ಮೂಲಕ ನೀಡಿದ ಸಂತ ಶ್ರೇಷ್ಠರಾಗಿದ್ದಾರೆ ಎಂದು ಪುತ್ತೂರು ಉಪ ತಹಸೀಲ್ದಾರ್ ಸುಲೋಚನಾ ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ ಸಂತಶ್ರೇಷ್ಠ ಕನಕದಾಸರ ೫೧೪ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಿಮ್ಮಪ್ಪ ನಾಯಕ ಎಂಬ ಹೆಸರಿನ ಯೋಧನಾಗಿದ್ದ ಕನಕದಾಸರು ಯುದ್ಧದಲ್ಲಿ ಸೋಲುಂಡು ಪರಿವರ್ತನೆ ಹೊಂದಿ ಬಳಿಕ ಭಗವಂತನಿಗೆ ದಾಸರಾದರು. ಸೋಲು ಜೀವನದಲ್ಲಿ ಇದೆ ಎನ್ನುವ ಸಂದೇಶ ನೀಡಿದರು. ಮುಕ್ತಿ ಮಾರ್ಗದ ಮೂಲಕ ಜಗತ್ತಿನ ಒಳಿತನ್ನು ಕಂಡವರು. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಬದಲಾವಣೆಯ ಹರಿಕಾರರು. ತನ್ನ ಕೀರ್ತನೆಗಳ ಮೂಲಕ ಸತ್ಯದ ಅರಿವು ಮೂಡಿಸಿದ ಅವರ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.ಮುಖ್ಯ ಅತಿಥಿ ಕೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಮಾತನಾಡಿ, ಸಂವಿಧಾನ, ಪ್ರಜಾಪ್ರಭುತ್ವ ಹೇಳುವ ಸಂದೇಶವನ್ನು ಕನಕದಾಸರು ಅಂದೇ ಹೇಳಿದ್ದಾರೆ. ಪ್ರೀತಿ, ಸಹಬಾಳ್ವೆ, ಒಗ್ಗಟ್ಟಿನ ಸಂದೇಶ ಅವರ ಕೀರ್ತನಾ ಸಾಹಿತ್ಯದಲ್ಲಿ ಕಾಣಬಹುದು ಎಂದರು.ಉಪತಹಸೀಲ್ದಾರ್ ರವಿಕುಮಾರ್ ಕನಕದಾಸರ ‘ನಿನ್ನಂತಾಗಬೇಕು’ ಕೀರ್ತನೆಯನ್ನು ಹಾಡಿದರು. ಸಾಮಾಜಿಕ ಅರಣ್ಯ ವಿಭಾಗದ ವಲಯಾರಣ್ಯಾಧಿಕಾರಿ ವಿದ್ಯಾರಾಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆರಂಭದಲ್ಲಿ ಅತಿಥಿಗಳು ದೀಪ ಬೆಳಗಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿದರು. ಕಂದಾಯ ಇಲಾಖೆಯ ದಯಾನಂದ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಪಾಲ್ಗೊಂಡರು.