ಸಾರಾಂಶ
- ದಾವಿವಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಶಾಸ್ತ್ರಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಧರ್ಮ, ದೇವರ ಹೆಸರಲ್ಲಿ ಜನಸಾಮಾನ್ಯರ ಶೋಷಣೆ ಖಂಡಿಸುವ ಜೊತೆಗೆ ಭಕ್ತಿಪಂಥದ ಹೊಸ ಸಮನ್ವಯ ತತ್ವ ಪ್ರತಿಪಾದಿಸಿದ ದಾರ್ಶನಿಕ ವ್ಯಕ್ತಿ ದಾಸಶ್ರೇಷ್ಠ ಕನಕದಾಸ ಎಂದು ವಿಜಯನಗರದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ ಅಭಿಪ್ರಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಘಟಕ ವತಿಯಿಂದ ಏರ್ಪಡಿಸಿದ್ದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರು ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಲಿಂಗ, ವರ್ಣ, ಜಾತಿ, ಭೇದಭಾವ ತೊರೆದು ಸಮಾನತೆ ಸಾರುವ ಜೊತೆಗೆ ಭಕ್ತಿಯ ವೈಚಾರಿಕ ವಿಚಾರಗಳನ್ನು ನೆಲೆಗೊಳಿಸಿದರು ಎಂದರು.
15ನೇ ಶತಮಾನದಲ್ಲಿಯೇ ಜಾತಿರಹಿತ ಸಮಾಜಕ್ಕೆ ಕನಕದಾಸರು ಅಡಿಪಾಯ ಹಾಕಿದರು. ಆದರೆ, ಇವತ್ತಿನ ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನು ಒಂದೊಂದು ಜಾತಿಗೆ ಸೀಮಿತವಾಗಿ ನೋಡುತ್ತಿರುವುದು ಖೇದಕರ ಸಂಗತಿ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಮಾತನಾಡಿ, ಕನಕದಾಸರು ನಾಡು ಕಂಡ ಅಪ್ರತಿಮ ದಾಸವೇಣ್ಯರು. ಇಂದಿನ ವಿದ್ಯಮಾನಗಳನ್ನು ತಮ್ಮ ಕಾಲಘಟ್ಟದಲ್ಲೇ ಕೀರ್ತನೆಗಳ ಮೂಲಕ ಪ್ರಸ್ತುತಪಡಿಸಿರುವುದು ಅವರ ವಿಚಾರಧಾರೆಗೆ ಹಿಡಿದ ಕೈಗನ್ನಡಿ. ಮೌಢ್ಯಾಚಾರದ ವಿರುದ್ಧ 12ನೇ ಶತಮಾನದಿಂದ ಇಲ್ಲಿವರೆಗೂ ಹೋರಾಟಗಳು ನಡೆದು ಬಂದರೂ ಇದರಿಂದ ಮುಕ್ತವಾಗಿಲ್ಲ. ವಿದ್ಯಾರ್ಥಿಗಳು ದಾರ್ಶನಿಕರ ವಿಚಾರಧಾರೆ ಹಾಗೂ ಆದರ್ಶಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ, ಹಣಕಾಸು ಅಧಿಕಾರಿ ದ್ಯಾಮಾನಗೌಡ ಮುದ್ದನಗೌಡರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಡಾ. ಪಿ.ನಾಗಭೂಷಣ ಗೌಡ ಸ್ವಾಗತಿಸಿ, ರುಜ್ವಾನ್ ಕಾರ್ಯಕ್ರಮ ನಿರೂಪಿಸಿದರು.- - - -20ಕೆಡಿವಿಜಿ33:
ದಾವಣಗೆರೆ ವಿ.ವಿ.ಯಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ದಾಸಶ್ರೇಷ್ಠ ಕನಕದಾಸ ಭಾವಚಿತ್ರಕ್ಕೆ ನಮಿಸಿದರು.