ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಂತಶ್ರೇಷ್ಠ ಕನಕದಾಸ ಅವರಲ್ಲಿ ಇದ್ದಂತಹ ಕವಿತ್ವ ನಿಸರ್ಗ ಸಹಜ ಕವಿತ್ವ. 2000 ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ನೋಡಿದರೆ, ಕನಕದಾಸರಂತಹ ಕವಿ ಮತ್ತೊಬ್ಬರಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಸಿ. ನಾಗಣ್ಣ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ಸೋಮವಾರ ಆಯೋಜಿಸಿದ್ದ ದಾಸಶ್ರೇಷ್ಠ ಸಂತ ಕವಿ ಶ್ರೀ ಕನಕದಾಸರ 537ನೇ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರು ಸುಮಾರು 90 ವರ್ಷಗಳ ತಮ್ಮ ಜೀವಿತಾವಧಿಯ ವಸಂತ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದರು.
14- 15ನೇ ಶತಮಾನದ ಸಂತಶ್ರೇಷ್ಠ ಕನಕದಾಸರಿಗೂ ಆಧುನಿಕ ಕಾಲದ ಕುವೆಂಪು ಅವರಿಗೂ ಅವಿನಾಭಾವ ಸಂಬಂಧವಿದ್ದು, ಇಬ್ಬರು ಕ್ರಾಂತಿಕಾರಿಗಳಾಗಿದ್ದರು. ಸಂಪೂರ್ಣ ವ್ಯಕ್ತಿತ್ವವನ್ನು ಹೊಂದಿದ್ದರು. ಇಂದು ಅವರ ಆದರ್ಶಗಳು, ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಯುವ ಜನರು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಕನಕದಾಸರು ಕಲಿ, ಕವಿ ಹಾಗೂ ಸಂತರು ಮೂರು ರೀತಿಯಲ್ಲಿ ಅವರು ಬದುಕಿ, ತ್ರಿರಂಗದಲ್ಲಿ ಕಲಿಯಾಗಿ, ಕವಿಯಾಗಿ, ಸಂತರಾಗಿ ಲೋಕಕ್ಕೆ ಶ್ರೇಷ್ಠ ಮಾದರಿಯನ್ನು ಒದಗಿಸಿದ್ದಾರೆ. ನಾನಾ ಧರ್ಮಗಳನ್ನು ಹೊಂದಿರುವ ದೇಶ ನಮ್ಮದು. ಹಿಂದುಸ್ಥಾನದಲ್ಲಿ ಹಲವಾರು ಭಕ್ತಿ ಪಂಥಗಳನ್ನು ಕಾಣಬಹುದಾಗಿದೆ. ಸುಮಾರು 800 ವರ್ಷಗಳ ಹಿಂದೆ ಮಹನೀಯರು ಹಾಕಿಕೊಟ್ಟಂತಹ ಭಕ್ತಿ ಪಂಥಗಳು ಇಂದಿಗೂ ದೇಶದ ಮೂಲೆ ಮೂಲೆಯಲ್ಲಿ ನೆಲೆಸಿವೆ ಎಂದರು.
ಮಹಾನ್ ವ್ಯಕ್ತಿ ಕನಕದಾಸರುಸಂತ ಶ್ರೀ ಕನಕದಾಸ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕನಕದಾಸರು ಮೇಲ್ಪಂತೀಯ ದಾಸ ಶ್ರೇಷ್ಠರಲ್ಲಿ ಒಬ್ಬರು. ಸಮಾಜದಲ್ಲಿರುವ ಅಂಕು- ಡೊಂಕು, ತಾರತಮ್ಯವನ್ನು ಖಂಡಿಸಿ, ತಮಗಿದ್ದ ಸಿರಿತನದ ವೈಭವವನ್ನು ತ್ಯಜಿಸಿ ಜನರ ಕಷ್ಟಕ್ಕೆ ಸ್ಪಂದಿಸಲು ಮುಂದಾದವರು. ಮೇಲು ಕೀಳೆಂಬುದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಮಾಜಕ್ಕೆ ತೋರಿಸಿದ ಮಹಾನ್ ವ್ಯಕ್ತಿ ಕನಕದಾಸರು ಎಂದರು.
‘ಸಂತರು ಮೂಲತಃ ಲೋಕೋಪಕಾರಿಗಳು. ಲೋಕದ ಜನರು ಬಾಳಿ ಬದುಕಿ ಜನರಲ್ಲಿ ಶಾಂತಿ ನೆಮ್ಮದಿ ನೆಲಸಲೆಂದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದಂತವರು. ಕನಕದಾಸರು ಶ್ರೇಷ್ಠ ಸಂತರ ಸಾಲಿನಲ್ಲಿ ವಿರಾಜಮಾನವಾಗಿ ಉಳಿಯುವಂತವರಾಗಿದ್ದು, ಅವರನ್ನು ನೆನೆಯುವುದರಿಂದ ಸಮಾಜದಲ್ಲಿ ಶಾಂತಿ- ಸಮಾನತೆ ನೆಲೆಸಿ, ಜನ ಮಾನಸದಲ್ಲಿ ನವ ಚೈತನ್ಯದ ಜಾಗೃತಿಯಾಗಲಿದೆ.’- ಪ್ರೊ.ಸಿ. ನಾಗಣ್ಣ, ಚಿಂತಕ