ಸಾಮಾಜಿಕ ಅಸಮಾನತೆ ನಿವಾರಣೆಗೆ ಶ್ರಮಿಸಿದ ಕನಕದಾಸ

| Published : Nov 11 2025, 01:45 AM IST

ಸಾರಾಂಶ

ದಾಸರು, ಶಿವಶರಣರು, ಕವಿಗಳು, ದಾರ್ಶನಿಕರು ಸಮಾಜ ಸುಧಾರಕರು. ಇವರೆಲ್ಲ ಒಂದೇ ಜಾತಿಗೆ ಸೀಮಿತರಲ್ಲ. ಸಮಾಜದಲ್ಲಿದ್ದ ಅಸಮಾನತೆ ವಿರುದ್ಧ ಹೋರಾಡಿದ ಇಂಥ ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತವನ್ನಾಗಿ ಮಾಡದೇ ಸಮಾಜದ ಎಲ್ಲ ಜನರು ಸೇರಿ ಆಚರಿಸಬೇಕಾಗಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ಹೇಳಿದ್ದಾರೆ.

- ಕನಕ ಸೇವಾ ಟ್ರಸ್ಟ್‌ನಿಂದ ಕನಕದಾಸ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್‌ ನಾಗರಾಜ್‌

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ದಾಸರು, ಶಿವಶರಣರು, ಕವಿಗಳು, ದಾರ್ಶನಿಕರು ಸಮಾಜ ಸುಧಾರಕರು. ಇವರೆಲ್ಲ ಒಂದೇ ಜಾತಿಗೆ ಸೀಮಿತರಲ್ಲ. ಸಮಾಜದಲ್ಲಿದ್ದ ಅಸಮಾನತೆ ವಿರುದ್ಧ ಹೋರಾಡಿದ ಇಂಥ ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತವನ್ನಾಗಿ ಮಾಡದೇ ಸಮಾಜದ ಎಲ್ಲ ಜನರು ಸೇರಿ ಆಚರಿಸಬೇಕಾಗಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ಹೇಳಿದರು.

ಸೋಮವಾರ ಪಟ್ಟಣದ ಕುರುಬರ ಬೀದಿಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಾಲಯದ ಬಳಿ ಶ್ರೀ ಕನಕ ಸೇವಾ ಟ್ರಸ್ಟ್, ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಪುತ್ಥಳಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಜಯಂತಿಗಳು ಜಾತಿಗೆ ಸೀಮಿತವಾಗಿರುವುದು ವಿಷಾದನೀಯ. ಮಹಾನ್‌ ದಾರ್ಶನಿಕರ, ಕವಿಗಳ ಸಮಾಜ ಸುಧಾರಕರ ಜೀವನ ಮತ್ತು ಅವರ ತತ್ವ -ಸಿದ್ಧಾಂತಗಳು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲ ವರ್ಗದ ಜನರು ಭಾಗವಹಿಸಬೇಕು ಎಂದರು.

ಕುರುಬ ಸಮಾಜದ ನಗರ ಘಟಕದ ಅಧ್ಯಕ್ಷ ಕೆ.ಆರ್.ಗೋಪಿ ಮಾತನಾಡಿ, ಕನಕದಾಸರು ಜನ್ಮತಹ ಕುರುಬ ಸಮಾಜದಲ್ಲಿ ಜನಿಸಿದರೂ ವ್ಯಾಸರಾಯರ ಆಶ್ರಯದಲ್ಲಿ ಬೆಳೆದು ಹರಿದಾಸರೆಂದೇ ಪ್ರಖ್ಯಾತಿ ಪಡೆದವರಾಗಿದ್ದಾರೆ. ಆಗಿನ ಕಾಲದಲ್ಲಿದ್ದ ಜಾತಿ ತಾರತಮ್ಯದ ವಿರುದ್ಧ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬಂಥ ಜಾತ್ಯಾತೀತತೆ ಪೋಷಿಸುವ ಹಲವಾರು ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಸಮಾಜದಲ್ಲಿದ್ದ ಜಾತಿ ಪದ್ಧತಿಯ ವಿರುದ್ಧ ಜನರನ್ನು ಜಾಗೃತಗೊಳಿಸಿದ ಮಹಾನ್ ಸಂತ ಕನಕ ಎಂದರು.

ಸಮಾರಂಭಕ್ಕೂ ಮುನ್ನ ಅಲಂಕೃತಗೊಂಡ ವಾಹನದಲ್ಲಿ ಶ್ರೀ ಕನಕದಾಸರ ಪುತ್ಥಳಿಯನ್ನು ಇಟ್ಟುಕೊಂಡು ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕುರುಬ ಸಮಾಜದ ಪ್ರಮುಖರಾದ ಕರಡೇರ್ ರಾಜು, ಲೋಕೇಶ್, ನಾಗು, ರಮೇಶ್, ನಾಗರಾಜ್, ಕುಮಾರಪ್ಪ, ಮಂಜುನಾಥ್, ಮಾರುತಿ, ರಾಮು, ಸಂದೀಪ್, ಎ.ಸಿ.ಚಂದ್ರು, ರಮೇಶ್, ಕೆ.ಆರ್.ಮಂಜುನಾಥ್, ಪಟ್ಲಿ ನಾಗರಾಜ್, ಪರಮೇಶ್ವರಪ್ಪ, ಶಿವಶಂಕರ್ ಮೊದಲಾದರು ಹಾಜರಿದ್ದರು.

- - -

-10ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಕುರುಬರ ಬೀದಿಯಲ್ಲಿ ಶ್ರೀ ಕನಕ ಸೇವಾ ಟ್ರಸ್ಟ್, ಕುರುಬ ಸಮಾಜದಿಂದ ನಡೆದ ಕನಕ ಜಯಂತಿಯಲ್ಲಿ ಕನಕದಾಸರ ಪುತ್ಥಳಿ ಮೆರವಣಿಗೆಗೆ ತಹಸೀಲ್ದಾರ್ ಎನ್.ಜೆ.ನಾಗರಾಜ್ ಚಾಲನೆ ನೀಡಿದರು.