ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕರ್ನಾಟಕದಲ್ಲಿ ೧೫ರಿಂದ ೧೬ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್. ಪಿ. ಪ್ರಕಾಶ್‌ಗೌಡ ತಿಳಿಸಿದರು.ಪಟ್ಟಣದ ತಾಪಂ ವತಿಯಿಂದ ನಡೆದ ೫೩೭ನೇ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸ ಪರಂಪರೆಯಲ್ಲಿ ಬರುವ ೨೫೦ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕದ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಜೀವನದಲ್ಲಿ ವೈರಾಗ್ಯ ಮೂಡಿ ಹರಿಭಕ್ತರಾದರಂತೆ ಎಂದು ಹೇಳಿದರು.
ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ೧೫೦೯ರಲ್ಲಿ ಹಿಂದೂ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರೀ ಒಂದು ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. ೧೫-೧೬ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರು.ಕನಕದಾಸರು ಹಾಕಿಕೊಟ್ಟ ಚಿಂತನೆ ಮಾರ್ಗದರ್ಶನಗಳು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಯುವ ಪೀಳಿಗೆ ಅವರ ಸನ್ಮಾರ್ಗದಲ್ಲಿ ನಡೆಯಬೇಕು. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾಧಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ ಎಂದರು.
ಸುಮಾರು ೩೧೬ ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಎಂದರೆ ಮೋಹನತರಂಗಿಣಿ, ನಳಚರಿತ್ರೆ, ರಾಮಧ್ಯಾನಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕನ್ನಡ ಚಲನಚಿತ್ರೋದ್ಯಮದ ಕನ್ನಡ ನಟ ಮತ್ತು ಗಾಯಕ ಡಾ.ರಾಜ್‌ಕುಮಾರ್ ೧೯೬೦ರ ಚಲನಚಿತ್ರ ಭಕ್ತ ಕನಕದಾಸರಲ್ಲಿ ಕನಕದಾಸರಾಗಿ ನಟಿಸಿದ್ದಾರೆ ಎಂದರು.ತಾಪಂ ಇಒ ಜಿ. ಆರ್. ಹರೀಶ್ ಮಾತನಾಡಿದರು. ಕೆಡಿಪಿ ಸದಸ್ಯ ಕಬ್ಬಾಳುಮಹೇಶ್, ಗುರುಪ್ರಸಾದ್, ತಾಪಂ ಅಧಿಕಾರಿ ಗಿರೀಶ್ ಇದ್ದರು.