ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ವೈದ್ಯಕೀಯ ಸೇವೆಯಲ್ಲಿ ಡಾ. ವೆಂಕಪ್ಪನವರು ಬಡ ಜನರಿಗೆ ನೀಡಿರುವ ಗುಣಮಟ್ಟದ ಚಿಕಿತ್ಸೆ ಅಪಾರ. ಅದು ಇಂದಿಗೂ ಜನರ ಮನಸ್ಸಲ್ಲಿ ನೆಲೆ ಮಾಡಿರುವುದು ಶ್ಲಾಘನೀಯ. ಬಡವರಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಜೊತೆಗೆ ಒಳ್ಳೆಯ ವ್ಯಕ್ತಿತ್ವವಿದ್ದರೆ ಅದು ಕನಕರಡ್ಡಿಯವರದು. ಗ್ರಾಮೀಣ ಭಾಗದ ಜನರಿಗೆ ಅನುಕೂಲಕ್ಕಾಗಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ನುರಿತ ವೈದ್ಯರನ್ನು ಸೇರಿಸಿಕೊಂಡು ಅತ್ಯುತ್ತಮ ಚಿಕಿತ್ಸೆ ನೀಡಲಿ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ ಹೇಳಿದರು.ಪಟ್ಟಣದ ವೆಂಕಟೇಶ ಆಸ್ಪತ್ರೆಯಲ್ಲಿ ನಾರಾಯಣ ಹೆಲ್ತ್ ಸಹಯೋಗದಲ್ಲಿ ಭಾನುವಾರ ನಡೆದ ವೈದ್ಯಕೀಯ ಯಂತ್ರಗಳ ಉದ್ಘಾಟನೆ ಮತ್ತು ಡಾ.ವಿ.ಪಿ. ಕನಕರಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ಎಷ್ಟೋ ರೋಗಿಗಳಿಗೆ ಮರಳಿ ಜೀವದಾನ ಮಾಡಿದ್ದಾರೆ. ವಿಶ್ರಾಂತಿ ಬದಿಗೊತ್ತಿ ನಿರಂತರ ಚಿಕಿತ್ಸೆ ನೀಡಿ ರೋಗಿಗಳ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ. ದೂರದ ಊರಿಗೆ ಹೋಗುವ ಅವಶ್ಯಕತೆ ಇಲ್ಲದಂತೆ ಕನಕರಡ್ಡಿ ಆಸ್ಪತ್ರೆಯೂ ಕೂಡ ಉತ್ತಮ ಸೇವೆ ನೀಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಬಡವರ ಸೇವೆಯಲ್ಲಿಯೇ ಈ ಕುಟುಂಬ ಇಂದಿಗೂ ಮುನ್ನಡೆಯುತ್ತಿದೆ. ಒಳ್ಳೆಯ ಧ್ಯೇಯೋದ್ದೇಶ ಇಟ್ಟುಕೊಂಡು ವೈದ್ಯಕೀಯ ಸೇವೆಯ ಜೊತೆಗೆ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜ್ ಆರಂಭಿಸಿರುವುದು ಉತ್ತಮ ಕೆಲಸ ಎಂದರು.
ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಮಾತನಾಡಿ, ಇತ್ತೀಚೆಗೆ ಚಿಕ್ಕ ಮಕ್ಕಳಲ್ಲಿ ಹೃದಯ ಸಂಬಂಧಿತ ಕಾಯಿಲೆ ಕಾಣುತ್ತಿದೆ. ದೂರದ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಪ್ರಾಣಹಾನಿಯಾಗಬಾರದು ಎಂಬ ಉದ್ದೇಶದಿಂದ ತಮ್ಮ ಆಸ್ಪತ್ರೆಯಲ್ಲಿ ಶೀಘ್ರ ಹೃದಯ ಚಿಕಿತ್ಸೆ ಸೌಲಭ್ಯ ಒದಗಿಸಿದ ಡಾ.ಅಜಿತ ಕನಕರಡ್ಡಿಯವರಿಗೆ ಕೃತಜ್ಞತೆ ತಿಳಿಸಿದರು.ವೆಂಕಟೇಶ ಆಸ್ಪತ್ರೆಯ ಚೇರಮನ್ ಡಾ. ಅಜೀತ ಕನಕರಡ್ಡಿ ಪ್ರಸ್ತಾವಿಕ ಮಾತನಾಡಿ, ನಮ್ಮ ತಂದೆ ಬಡವರ ಡಾಕ್ಟ್ರು ಎಂದೇ ಪ್ರಸಿದ್ಧಿ ಪಡೆದವರು. ಇಲ್ಲಿನ ಜನರಿಗೆ ಒಳ್ಳೆಯ ಚಿಕಿತ್ಸೆ ಸೌಲಭ್ಯ ಸಿಗಬೇಕೆಂಬುದು ಅವರ ಗುರಿಯಾಗಿತ್ತು. ಅವರ ಮಾರ್ಗದರ್ಶನದಂತೆ ಇಂದು ಅತ್ಯಾಧುನಿಕ ಸೌಲಭ್ಯ ಹೊಂದಿ 100 ಹಾಸಿಗೆಗಳ ಹೈಟೆಕ್ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಜನರ ಪ್ರೋತ್ಸಾಹ, ಆಶೀರ್ವಾದ, ನಂಬಿಕೆಯೇ ಕಾರಣವೆಂದರು.
ಜೆ.ಟಿ. ಪಾಟೀಲ, ಡಾ.ಸುರೇಶ ದುಗ್ಗಾಣಿ, ಡಾ.ಆರ್.ಟಿ. ಪಾಟೀಲ, ಡಾ.ರವಿವರ್ಮಪಾಟೀಲ, ಡಾ.ವಿಠ್ಠಲ ಬಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕ್ಯಾತ್ ಲ್ಯಾಬ್ ಯಂತ್ರಕ್ಕೆ ಪೂಜೆ ಸಲ್ಲಿಸಿ, ಆಶೀರ್ವಚನ ನೀಡಿದರು. ಎಲ್ಲಾ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಶಾಸಕ ಸಿದ್ದು ಸವದಿ, ಮುಖಂಡರಾದ ಸಿದ್ದು ಕೊಣ್ಣೂರ, ಯಲ್ಲನಗೌಡ ಪಾಟೀಲ, ದೇವಳ ದೇಸಾಯಿ, ಮಹಾಲಿಂಗಪ್ಪ ಕೋಳಿಗುಡ್ಡ, ಭೀಮಶಿ ಹೊಸೂರು, ಪ್ರಕಾಶ ಹೊಸೂರ, ಮಲ್ಲಪ್ಪ ಸಿಂಗಾಡಿ, ರವಿ ಜವಳಗಿ ಉಪಸ್ಥಿತರಿದ್ದರು. ಗೀತಾ ಕೋಲಕಾರ ಪ್ರಾರ್ಥಿಸಿ, ಪತ್ರಕರ್ತ ಜಯರಾಮ ಶೆಟ್ಟಿ, ವಿನಯಾ ಜಿಗಜಿಣಗಿ ಮತ್ತು ಸುಮಲತಾ ಕೊಲ್ಲೂರ ನಿರೂಪಿಸಿ, ವೆಂಕಟೇಶ ಕನಕರಡ್ಡಿ ವಂದಿಸಿದರು.
)
;Resize=(128,128))
;Resize=(128,128))