ಕಂದಗಲ್ಲು ಮೊರಾರ್ಜಿ ವಸತಿ ಶಾಲೆಯಲ್ಲಿ ಮುಗಿಯದ ಸಮಸ್ಯೆ ಸರಮಾಲೆ

| Published : Aug 07 2024, 01:08 AM IST

ಕಂದಗಲ್ಲು ಮೊರಾರ್ಜಿ ವಸತಿ ಶಾಲೆಯಲ್ಲಿ ಮುಗಿಯದ ಸಮಸ್ಯೆ ಸರಮಾಲೆ
Share this Article
  • FB
  • TW
  • Linkdin
  • Email

ಸಾರಾಂಶ

ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮೆನು ಪ್ರಕಾರ ಊಟ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿರೋಧ ತೋರಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಪನ್ಯಾಸಕರ ಸಮಸ್ಯೆ ಮಾತ್ರವಲ್ಲ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ವಸತಿ ಶಾಲೆಯಲ್ಲಿ ವಿದ್ಯುತ್ ಹೋದರೆ ಕತ್ತಲಲ್ಲಿ ಇರಬೇಕಿದೆ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮೆನು ಪ್ರಕಾರ ಊಟ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿರೋಧ ತೋರಿದ್ದಾರೆ.

ಪ್ರಾಂಶುಪಾಲ ಮತ್ತು ಸಿಬ್ಬಂದಿ ಸದ್ಯಕ್ಕೆ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ. 400ಕ್ಕೂ ಹೆಚ್ಚು ಬಾಲಕರು 6ನೇ ತರಗತಿಯಿಂದ 12ನೇ ತರಗತಿಯವರೆಗೆ ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಬಾಳೆಹಣ್ಣು, ಮೊಟ್ಟೆ, ಹಾಲು ಸರಿಯಾಗಿ ನೀಡುತ್ತಿಲ್ಲ. ಗೀಜರ್ ಸರಿ ಇಲ್ಲದ ಕಾರಣ ಮಳೆಗಾಲದಲ್ಲಿ ಮಕ್ಕಳು ತಣ್ಣೀರಿನಲ್ಲೇ ಸ್ನಾನ ಮಾಡಬೇಕು. ಬಾಲಕಿಯರ ವಸತಿ ಶಾಲೆಯಲ್ಲಿ ಮಾತ್ರ ಕೆಲವು ಗೀಜರ್ ಕೆಲಸ ಮಾಡುತ್ತಿವೆ.

ಇತ್ತೀಚೆಗೆ ವಿದ್ಯುತ್ ಗ್ರಾಮೀಣ ಭಾಗದಲ್ಲಿ ರಾತ್ರಿ ಮಳೆ ಬಂದರೆ ಇಡೀ ರಾತ್ರಿ ವಿದ್ಯುತ್ ಇರುವುದಿಲ್ಲ. ಆ ಸಮಯದಲ್ಲಿ ಇಡೀ ವಸತಿ ಶಾಲೆ ಕತ್ತಲಲ್ಲಿರಬೇಕು. ಮಕ್ಕಳ ಕೋಣೆಗಳಲ್ಲಿ ರೀಚಾರ್ಜ್ ಬಲ್ಬ್ ಇದ್ದರೂ ಓದಲು ಬೆಳಕು ಸಾಕಾಗುವುದಿಲ್ಲ. ಹೊರಗಡೆ ಕತ್ತಲು ಆವರಿಸುತ್ತದೆ. ಇಲ್ಲಿ ಸೊಳ್ಳೆ ಕಾಟ ಹೆಚ್ಚಿದ್ದು, ರಾತ್ರಿ ವಿದ್ಯುತ್‌ ಇಲ್ಲದೇ ಇರುವುದರಿಂದ ಫ್ಯಾನ್‌ ಚಾಲೂ ಆಗುವುದಿಲ್ಲ. ಶಾಲೆಯಲ್ಲಿ ಯುಪಿಎಸ್ ಕೆಟ್ಟು ಹತ್ತಾರು ತಿಂಗಳು ಕಳೆದರೂ ಸರಿಪಡಿಸಿಲ್ಲ. ಇಲಾಖೆಯಲ್ಲಿ ಹಣ ಇಲ್ಲವೇ ಎಂಬುದು ಪೋಷಕರ ಆರೋಪವಾಗಿದೆ.

ಇಷ್ಟೆಲ್ಲ ಸಮಸ್ಯೆಗಳನ್ನು ಸಹಿಸಿಕೊಂಡ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಪೋಷಕರಿಗೆ ಹೇಳಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಪ್ರತಿಭಟಿಸಲು ಮುಂದಾದಾಗ ಸದ್ಯದಲ್ಲೇ ಎಲ್ಲ ಸರಿಪಡಿಸುತ್ತೇವೆ ಎಂದು ಪ್ರಾಂಶುಪಾಲರು ಭರವಸೆ ನೀಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸುಮ್ಮನಾಗಿದ್ದಾರೆ. ಈ ಬಗ್ಗೆ ಎಲ್ಲಿಯೂ ಮಾತನಾಡದಂತೆ ವಿದ್ಯಾರ್ಥಿಗಳಿಗೆ ಸಮಾಧಾನಪಡಿಸಿದ್ದಾರೆ. ಪೋಷಕರಂತೂ ತಮ್ಮ ಮಕ್ಕಳನ್ನು ಯಾಕಾದರೂ ಈ ವಸತಿಶಾಲೆಗೆ ಸೇರಿಸಿದ್ದೇವೋ ಎಂದು ಕೈಕೈ ಹಿಚುಕಿಕೊಳ್ಳುತ್ತಾರೆ.

ಇನ್ನು ಸೋಪ್, ಪೇಸ್ಟ್ ಕಿಟ್ ಇಲಾಖೆಯಿಂದಲೇ 1 ವರ್ಷದಿಂದ ಯಾವ ವಸತಿ ಶಾಲೆಗೂ ನೀಡಿಲ್ಲ. ಹೀಗಾದರೆ ಸರ್ಕಾರಿ ವಸತಿಶಾಲೆಗಳ ಬಗ್ಗೆ ಮಕ್ಕಳಿಗೆ ಪೋಷಕರಿಗೆ ಇರುವ ಗೌರವ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಪೋಷಕರು.

ಊಟದ ಮೆನು ಪ್ರಕಾರವೇ ಊಟ ನೀಡುತ್ತೇವೆ. ಗ್ರೈಂಡರ್ ಕೈ ಕೊಟ್ಟಿದ್ದರಿಂದ ದೋಸೆ ನೀಡಿಲ್ಲ. ಬಾಳೆಹಣ್ಣು, ಮೊಟ್ಟೆ ಆ ಸಮಯಕ್ಕೆ ನೀಡದಿದ್ದರೂ ಬೇರೆ ಸಮಯದಲ್ಲಿ ನೀಡಿದ್ದೇವೆ. ಯುಪಿಎಸ್ ಬ್ಯಾಟರಿ ಹಳೆಯದಾಗಿವೆ. ಹಾಗಾಗಿ ಕೆಲಸ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಕೋಣೆಗಳಲ್ಲಿ ರಿಚಾರ್ಜ್ ಬಲ್ಬ್ ಹಾಕಿದ್ದೇವೆ. ಹಂತ ಹಂತವಾಗಿ ಸರಿಪಡಿಸುತ್ತಿದ್ದೇವೆ ಎನ್ನುತ್ತಾರೆ ಕಂದಗಲ್ಲು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಎಸ್.ಸಿ. ಶಿವಕುಮಾರ.

ವಸತಿ ಶಾಲೆಯ ಮೆನು ಪ್ರಕಾರ ಊಟ ನೀಡುತ್ತಿಲ್ಲ. ಊಟ ಗುಣಮಟ್ಟದಲ್ಲಿ ಇಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಇದುವರೆಗೂ ಪಠ್ಯಪುಸ್ತಕ ನೀಡಿಲ್ಲ. ಬಾಲಕರ ಶೌಚಾಲಯ ಗಬ್ಬೆದ್ದಿದೆ. ಮಕ್ಕಳು ಸಮಸ್ಯೆ ಹೇಳಿಕೊಳ್ಳಲು ಭಯಪಡುತ್ತಾರೆ ಎನ್ನುತ್ತಾರೆ ಹೊಸಹಳ್ಳಿಯ ಪೋಷಕ ಕುಶಾಲ್.