ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು12ನೇ ಶತಮಾನದ ಶರಣರು ತಮ್ಮ ಚಳುವಳಿಯಲ್ಲಿ ಭಕ್ತಿಯನ್ನು ತಮ್ಮ ಕಾರ್ಯತಂತ್ರದ ಭಾಗವಾಗಿ ಬಳಸಿ ದೇವರು ಮತ್ತು ಧರ್ಮವನ್ನು ವೈದಿಕ ಮಧ್ಯವರ್ತಿಗಳಿಂದ ಮುಕ್ತಗೊಳಿಸಿದರು. ಅವರು ರಚಿಸಿರುವ ವಚನಗಳು ವೈದಿಕ ವ್ಯವಸ್ಥೆಯ ವಿರುದ್ಧದ ಬಂಡಾಯದ ನುಡಿಗಳಾಗಿವೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಮಠಾಧ್ಯಕ್ಷ ಡಾ. ಗುರುಬಸವ ಸ್ವಾಮಿಗಳು ನುಡಿದರು.ಅವರು ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಷಾಢಮಾಸದ ಮನೆಮನಗಳಿಗೆ ಶರಣರ ಸಂದೇಶ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆಗೆ ಗೌರವಯುತ ಸ್ಥಾನ ನೀಡಿದ್ದು ವಚನ ಸಾಹಿತ್ಯ. ಇವು ಇಂದು ಎಲ್ಲ ಜನಾಂಗ ಧರ್ಮದವರಿಗೂ ಬೇಕಾಗಿವೆ. ಇವುಗಳನ್ನು ರಚಿಸಿದ ಶರಣರನ್ನು ಆಯಾ ಜನಾಂಗಕ್ಕೆ ಜಾತಿಗೆ ಸೀಮಿತಗೊಳಿಸಿ ಜಯಂತಿಗಳನ್ನು ಆಚರಿಸುತ್ತಿರುವುದು ಜಾತ್ಯಾತೀತೆಯನ್ನು ಸಾರಿದ ಶರಣರಿಗೆ ಮಾಡಿದ ದ್ರೋಹ ಎಂದರು.ಇಂದು ಸಮಾಜದಲ್ಲಿ ಡೋಂಗಿ ಜಾತ್ಯಾತೀತ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಇವರೆಲ್ಲರೂ ತಮ್ಮ ಮೂಗಿನ ನೇರಕ್ಕೆ ಜಾತ್ಯಾತೀತತೆಯನ್ನು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಭಾರತದ ನಿಜವಾದ ಜಾತ್ಯಾತೀತ ನಾಯಕನೆಂದರೆ ಹನ್ನೆರಡನೇ ಶತಮಾನದ ಬಸವಣ್ಣ ಮಾತ್ರ. ಆತ ಮೇಲು ಕೀಳೆನ್ನದೆ ಎಲ್ಲರನ್ನೂ ತನ್ನ ಜೊತೆ ಇಟ್ಟುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜದಲ್ಲಿ ಅವರಿಗೆ ಗೌರವಯುತವಾದ ಸ್ಥಾನವನ್ನು ದೊರಕಿಸಿಕೊಟ್ಟ ಮಹಾಪುರುಷ ಎಂದರು.ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ ಶರಣರ ವಿಚಾರಧಾರೆಗಳು ಯಾವುದೇ ವೈದಿಕ ಮತ್ತು ಸಂಸ್ಕೃತ ಸಾಹಿತ್ಯದಿಂದ ಪ್ರೇರಣೆ ಪಡೆಯಲಿಲ್ಲ. ವಚನಗಳಲ್ಲಿನ ವಿಚಾರಧಾರೆಗಳು ಸ್ವಲ್ಪಮಟ್ಟಿಗೆ ತಮಿಳಿನ ಪುರಾತನರು ಮತ್ತು ಜಾತ್ಯಾತೀತರಾಗಿದ್ದ ನಾಥಪಂಥೀಯ ಸಿದ್ಧಾಂತಗಳಿಂದ ಪ್ರಭಾವಗೊಂಡಿವೆ ಎಂದರು.ಉಪನ್ಯಾಸ ನೀಡಿದ ಪ್ರಾಧ್ಯಾಪಕರಾದ ಡಾ. ಪುಷ್ಪಾವತಿ ಶಲವಡಿಮಠ ಮಾತನಾಡಿ, ಶರಣರು ದೇವರು ಮತ್ತು ಧರ್ಮದ ಅಸ್ತಿತ್ವವನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡು ಅವುಗಳಿಗೆ ವೈಜ್ಞಾನಿಕ ಮತ್ತು ವೈಚಾರಿಕ ಸ್ವರೂಪವನ್ನು ನೀಡುವ ಮೂಲಕ ಭಕ್ತಿಯನ್ನು ತಮ್ಮ ಚಳುವಳಿಯ ಒಂದು ಆಕರ್ಷಕ ಕಾರ್ಯತಂತ್ರವಾಗಿ ಪ್ರಯೋಗಾತ್ಮಕವಾಗಿ ಬಳಸಿಕೊಂಡರು. ಇದಕ್ಕೆ ಅವರು ಅನುಭಾವ ಎನ್ನುವ ಪಾರಿಭಾಷಿಕ ಪದವನ್ನು ಬಳಸಿದರು ಎಂದರು.ಉಪನ್ಯಾಸಕ ಡಾ. ಜಿ.ಸಿ.ಮಂಜುನಾಥ್ ಶರಣ ಸಂಸ್ಕೃತಿ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಅಕ್ಕನಾಗಮ್ಮ , ಹುಬ್ಬಳ್ಳಿ. ಕಮಲಮ್ಮ, ಎಂ.ಜಿ.ಶಿವಲಿಂಗಯ್ಯ, ಹಾಜರಿದ್ದರು. ಬಸವಕೇಂದ್ರದ ಸಿದ್ಧಗಂಗಮ್ಮ ಸಿದ್ಧರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿ.ಬಿ.ನಾಗಭೂಷಣ್ ಸ್ವಾಗತಿಸಿದರು, ಬಸವಕೇಂದ್ರದ ಕಲ್ಪನಾ ಟಿ.ಎಸ್. ವಂದಿಸಿದರು, ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು.