ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅಂತರ ಉಂಟು ಮಾಡಿವೆ: ಎಚ್.ಎಲ್.ಪುಪ್ಪಾ

| Published : May 12 2024, 01:20 AM IST

ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅಂತರ ಉಂಟು ಮಾಡಿವೆ: ಎಚ್.ಎಲ್.ಪುಪ್ಪಾ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಶಿಕ್ಷಣ ನೀತಿ, ರೀತಿಗಳಲ್ಲಿ ಗೊಂದಲಗಳಿದ್ದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಸೇವೆ ಮತ್ತು ಉದ್ಯಮ ಬೇರೆ ಬೇರೆಯಾಗಿದ್ದರೂ ಶಿಕ್ಷಣ ಉದ್ಯಮವಾಗಿರುವ ಸಂದರ್ಭದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಅದನ್ನು ಮಹಿಳೆಯಾಗಿ ನಿಭಾಯಿಸಿರುವ ಮೀರಾ ಶಿವಲಿಂಗಯ್ಯ ಸೇವೆ ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಉದ್ಯಮವಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅಂತರ ಉಂಟು ಮಾಡಿವೆ ಎಂದು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಪ್ರತಿಪಾದಿಸಿದರು. ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಮೀರಾ ಶಿವಲಿಂಗಯ್ಯ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ಸೇವೆ ಇಂದಿನ ದಿನಗಳಲ್ಲಿ ಮನುಕುಲಕ್ಕೆ ಪ್ರಮುಖವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರದ ನಡುವೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮನಾಗಿ ಓದಬಲ್ಲರು ಜೊತೆಗೆ ಅವಕಾಶವನ್ನು ಪಡೆಯುತ್ತಿರುವುದು ಪ್ರಶಂಸನೀಯ ಎಂದರು.

ಹೊಸ ಶಿಕ್ಷಣ ನೀತಿ, ರೀತಿಗಳಲ್ಲಿ ಗೊಂದಲಗಳಿದ್ದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಸೇವೆ ಮತ್ತು ಉದ್ಯಮ ಬೇರೆ ಬೇರೆಯಾಗಿದ್ದರೂ ಶಿಕ್ಷಣ ಉದ್ಯಮವಾಗಿರುವ ಸಂದರ್ಭದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಅದನ್ನು ಮಹಿಳೆಯಾಗಿ ನಿಭಾಯಿಸಿರುವ ಮೀರಾ ಶಿವಲಿಂಗಯ್ಯ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ಜಗತ್ತಿನ ಹಲವಾರು ಜೀವನ ಚರಿತ್ರೆಯನ್ನು ಓದಿದ್ದೇನೆ. ಒಬ್ಬ ಜೀವನ ಚರಿತ್ರೆ ಬರೆಯುವಾಗ ಏಕಪಾತ್ರಾಭಿನಯ ಇರುವುದಿಲ್ಲ. ಬದಲಿಗೆ ಅವನ ಸುತ್ತ ಹಲವಾರು ಪಾತ್ರಗಳು ಸುತ್ತುತ್ತವೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಬಗ್ಗೆ ಏನೋ ಬರೆದು ಬಿಟ್ಟಿದ್ದೇನೆ ವಿಶ್ವನಾಥ್ ಎಂಬುದನ್ನೇ ದೊಡ್ಡ ಗಲಾಟೆ ಮಾಡಿದರು. ಜಿಲ್ಲೆಯಲ್ಲಿ ಒಬ್ಬ ಹೆಣ್ಣು ಮಗಳು ಏನೆಲ್ಲ ಸಾಧನೆ ಮಾಡಬೇಕೆನ್ನುವುದನ್ನು ಮೀರಾ ಅವರನ್ನು ನೋಡಿ ಕಲಿಯಬೇಕಿದೆ ಎಂದರು.

ಅಭಿನಂದನೆ ಸ್ವೀಕರಿಸಿದ ಮೀರಾ ಶಿವಲಿಂಗಯ್ಯ ಮಾತನಾಡಿ, ನನ್ನ ಈ ಸಾಧನೆಗೆ ಕಂಪ್ಯೂಟರ್ ಶಿಕ್ಷಣ ತಳಹದಿಯಾಯಿತು. ತಾವು ನಡೆದು ಬಂದ ಜೀವನ ದಾರಿ ಒಳ್ಳೆಯ ಅನುಭವ ನೀಡಿದೆ. ಚಿಕ್ಕಂದಿನಿಂದಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಭಾವನೆ ಬಂದಿತ್ತು. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂದರು.

ಇದೇ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದಿರುವ ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಮ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಎಸ್.ಬಿ.ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಎಚ್.ಡಿ. ಸೋಮಶೇಖರ್, ಸಂಘದ ಲೋಕೇಶ್ ಚಂದಗಾಲು, ವಿಜಯಲಕ್ಷ್ಮಿ ರಘುನಂದನ್, ಉಪನ್ಯಾಸಕಿ ಅನಿತಾ, ಹನಕೆರೆ ನಾಗಪ್ಪ, ಕೆಂಪಮ್ಮ, ಕೋಣನಹಳ್ಳಿ ಜಯರಾಮು ಭಾಗವಹಿಸಿದ್ದರು.