ಕನ್ನಡ, ಕನ್ನಡಿಗರ ‘ಭದ್ರಕೋಟೆ’ ಮಂಡ್ಯ ಜಿಲ್ಲೆ..!

| Published : Oct 28 2024, 12:46 AM IST

ಸಾರಾಂಶ

ಮಂಡ್ಯ ಜಿಲ್ಲೆ ಉದಯವಾದ ನಂತರದಿಂದಲೂ ಹಲವು ಮಹತ್ವದ ಹೋರಾಟಗಳಿಗೆ ಜಿಲ್ಲೆ ಹೆಸರುವಾಸಿಯಾಗಿದೆ. ಅಲ್ಲದೇ, ಮಂಡ್ಯ ಜಿಲ್ಲೆ ಕನ್ನಡದ ಹಲವು ಪ್ರಥಮಗಳ ತವರೂರು. ಜಿಲ್ಲೆಯ ಹಲವಾರು ಕವಿಗಳು, ಸಾಹಿತಿಗಳು, ಬರಹಗಾರರು ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯ ಜಿಲ್ಲೆ ಅಕ್ಷರಶಃ ಕನ್ನಡ ಮತ್ತು ಕನ್ನಡಿಗರ ಭದ್ರಕೋಟೆಯಂತಿದೆ. ಗ್ರಾಮೀಣ ಸೊಡಿನೊಳಗೆ, ನೆಲದ ಸಂಸ್ಕೃತಿಯೊಂದಿಗೆ ಬೆರೆತುಹೋಗಿರುವ ಕನ್ನಡ ಭಾಷೆ ಜಿಲ್ಲೆಯೊಳಗೆ ನಿರುಮ್ಮಳವಾಗಿ ಉಸಿರಾಡುತ್ತಿದೆ.

ಮಂಡ್ಯ ಜಿಲ್ಲೆ ಉದಯವಾದ ನಂತರದಿಂದಲೂ ಹಲವು ಮಹತ್ವದ ಹೋರಾಟಗಳಿಗೆ ಜಿಲ್ಲೆ ಹೆಸರುವಾಸಿಯಾಗಿದೆ. ಅಲ್ಲದೇ, ಮಂಡ್ಯ ಜಿಲ್ಲೆ ಕನ್ನಡದ ಹಲವು ಪ್ರಥಮಗಳ ತವರೂರು. ಜಿಲ್ಲೆಯ ಹಲವಾರು ಕವಿಗಳು, ಸಾಹಿತಿಗಳು, ಬರಹಗಾರರು ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

ಈ ನೆಲದಲ್ಲಿ ನಿರಂತರವಾಗಿ ಕನ್ನಡದ ವಾತಾವರಣವನ್ನು ಸೃಷ್ಟಿಸುವಲ್ಲಿ ಸ್ಥಳೀಯ ಆಡಳಿತ, ವಿವಿಧ ಕನ್ನಡ ಸಂಘಟನೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ ಇಡೀ ಜಿಲ್ಲೆಯಲ್ಲಿ ಕನ್ನಡಕ್ಕೆ ಯಾವುದೇ ಧಕ್ಕೆ ಅಥವಾ ಆತಂಕದ ಸಂಗತಿಗಳು ಬಂದೊದಗಿರುವುದು ಸಮಾಧಾನಕರ ವಿಚಾರವಾಗಿದೆ.

ವಲಸಿಗರ ಸಂಖ್ಯೆ ಹೆಚ್ಚಿಲ್ಲ:

ಮಂಡ್ಯ ಜಿಲ್ಲೆಗೆ ಬರುತ್ತಿರುವ ವಲಸಿಗರ ಸಂಖ್ಯೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಇಲ್ಲಿ ಭಾಷಾ ವೈಷಮ್ಯ ಅಥವಾ ಸಂಘರ್ಷ ಉಂಟಾದ ಇತಿಹಾಸವೇ ಇಲ್ಲ. ಜಿಲ್ಲೆಯ ವಿವಿಧೆಡೆ ತಮಿಳು, ತೆಲುಗು, ಉರ್ದು, ಹಿಂದಿ ಸೇರಿದಂತೆ ವಿವಿಧ ಭಾಷಿಗರು ಬಂದು ನೆಲೆಸಿದ್ದರೂ ಅವರ ಮನೆಗಷ್ಟೇ ಅವರವರ ಮಾತೃಭಾಷೆ ಸೀಮಿತವಾಗಿದೆ. ಸಾರ್ವಜನಿಕ ಮತ್ತು ವ್ಯಾವಹಾರಿಕವಾಗಿ ಕನ್ನಡ ಭಾಷೆಯನ್ನೇ ಕಲಿತು ಆಡುವುದು ಅನಿವಾರ್ಯವಾಗಿದೆ. ಆ ಮೂಲಕ ಪರಭಾಷಿಗರೂ ಕನ್ನಡದ ಘನತೆಯನ್ನು ಎತ್ತಿ ಹಿಡಿದಿರುವುದು ಹೆಮ್ಮೆಯ ವಿಚಾರವಾಗಿದೆ.

ಹೋರಾಟಗಳಿಗೆ ಹೆಸರುವಾಸಿ:

ಮೊದಲಿನಿಂದಲೂ ಮಂಡ್ಯ ಜಿಲ್ಲೆ ರೈತಪರ, ಕನ್ನಡಪರ ಮತ್ತು ಜನಪರ ಹೋರಾಟಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಅನ್ಯ ಭಾಷಿಗರು ತಮ್ಮ ಭಾಷೆಯ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುವ ಮತ್ತು ವಿಸ್ತರಿಸುವ ಯಾವುದೇ ಪ್ರಯತ್ನಗಳನ್ನು ಮಾಡಿದ ಇತಿಹಾಸವಿಲ್ಲ. ಇಲ್ಲಿನ ಜನರು ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ಏಕೆಂದರೆ, ಮಂಡ್ಯದ ಹೋರಾಟದ ತೀವ್ರತೆಗೆ ಅನ್ಯ ಭಾಷಿಗರು ಇಲ್ಲಿ ಸವಾಲೊಡ್ಡುವ ಅಥವಾ ಪ್ರತಿಸ್ಪರ್ಧಿಗಳಾಗಿ ನಿಲ್ಲುವ ಪ್ರಯತ್ನವನ್ನು ಮಾಡಿಲ್ಲ. ಅಂತಹ ಧೈರ್ಯವನ್ನು ಇದುವರೆಗೂ ಯಾರೂ ತೋರಿಲ್ಲ. ಆದ್ದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಯಾವುದೇ ಆತಂಕಗಳು ಬಂದೊದಗಿಲ್ಲ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ.

ಸದಾ ಕನ್ನಡಪರ ವಾತಾವರಣ:

ಇತರೆ ಜಿಲ್ಲೆಗಳಲ್ಲಿ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರವೇ ಕನ್ನಡ ಕಡ್ಡಾಯದ ಮಾತುಗಳು ಮತ್ತು ಅದಕ್ಕೆ ಪೂರಕವಾದ ಹೋರಾಟಗಳು ಕಂಡುಬರುತ್ತವೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಸದಾ ಕನ್ನಡ ಪರವಾದ ವಾತಾವರಣವೇ ಇರುವುದು ವಿಶೇಷವಾಗಿದೆ.

ಇತ್ತೀಚಿನ ದಿನಗಳಲ್ಲಿ ಉದ್ಯೋಗವನ್ನು ಅರಸಿ ಬರುತ್ತಿರುವ ಉತ್ತರದ ಕಾರ್ಮಿಕರೂ ಕೂಡ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆಯೇ ವಿನಃ ಅಲ್ಲಿನ ಹಿಂದಿ ಭಾಷೆಯನ್ನು ಇಲ್ಲಿನ ಕನ್ನಡಿಗರಿಗೆ ಕಲಿಸುವ ದುಸ್ಸಾಹಸವನ್ನು ಮಾಡುತ್ತಿಲ್ಲ. ಇದನ್ನು ಗಮನಿಸಿದರೆ, ಮಂಡ್ಯಕ್ಕೆ ಯಾರೇ ಬಂದರೂ ಇಲ್ಲಿಯ ಭಾಷೆಯನ್ನು ಕಲಿತು, ಇಲ್ಲಿನ ಸೊಗಡಿಗೆ ಹೊಂದಾಣಿಕೆ ಆಗುತ್ತಾರೆಯೇ ವಿನಃ ಅವರವರ ಮಾತೃ ಸಂಸ್ಕೃತಿ ಮತ್ತು ಭಾಷೆಯನ್ನು ಇಲ್ಲಿ ಪ್ರಚುರಪಡಿಸುವ ಪ್ರಯತ್ನವನ್ನು ಮಾಡದಿರುವುದು ಸ್ಪಷ್ಟವಾಗುತ್ತದೆ.

ಪರಭಾಷಿಗರಿಂದ ಕನ್ನಡ ಬದ್ಧತೆ ಪ್ರದರ್ಶನ:

ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ತಮಿಳರು ಮತ್ತು ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಒಮ್ಮೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳು ಮೂಲಕ ಅಭ್ಯರ್ಥಿಯೊಬ್ಬರು ಸ್ಪರ್ಧಿಸಿ ೧೨ ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದ ದಾಖಲೆ ಇದೆ. ಅಲ್ಲದೇ, ಕಾವೇರಿ ಚಳವಳಿಯಲ್ಲೂ ಸಹ ತಮಿಳು ನಿವಾಸಿಗಳು ಇಲ್ಲಿನ ಜನರೊಡನೆ ಸೇರಿ ಕಾವೇರಿಗಾಗಿ ಹೋರಾಟ ಮಾಡುತ್ತಾರೆ ವಿನಃ ತಮಿಳುನಾಡುವ ಪರ ನಿಲ್ಲುವುದಿಲ್ಲ. ಅದು ಅವರ ಮಂಡ್ಯದ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಅದೇ ರೀತಿ ಮುಸ್ಲಿಮರು ಉರ್ದು ಮಾತೃ ಭಾಷೆಯಾಗಿದ್ದರೂ, ಸಾರ್ವಜನಿಕವಾಗಿ ಜಿಲ್ಲೆಯಲ್ಲಿ ಕನ್ನಡವನ್ನು ಕಲಿತು ಬಳಸುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಉರ್ದು ಮತ್ತು ತಮಿಳರಿಂದ ಕೂಡ ಕನ್ನಡಕ್ಕೆ ಧಕ್ಕೆಯಾಗಿಲ್ಲ. ಇದರ ಜೊತೆಗೆ ಮಂಡ್ಯ ನಗರದ ಪೇಟೆ ಬೀದಿಯಲ್ಲಿರುವ ಗುಜರಾತ್, ರಾಜಸ್ತಾನ್ ಮೂಲದ ಮಾರ್ವಾಡಿಗಳು ಹಲವು ದಶಕಗಳಿಂದ ಮಂಡ್ಯದ ಪೇಟೆ ಬೀದಿಯಲ್ಲಿ ಅವರ ಸಾರ್ವಜನಿಕ ಆಚಾರ, ವಿಚಾರ, ನಡೆ-ನುಡಿಗಳೆಲ್ಲವೂ ಕನ್ನಡಮಯವಾಗಿಯೇ ಮತ್ತು ಮಂಡ್ಯದ ಶೈಲಿಗೆ ಹೊಂದಾಣಿಕೆಯಾಗಿರುವುದು ಕಂಡುಬರುತ್ತದೆ.

ಕೌಟುಂಬಿಕ, ಶಾಲಾ ವಾತಾವರಣದಲ್ಲಿ ಕನ್ನಡ:

ಶೈಕ್ಷಣಿಕವಾಗಿ ಮಂಡ್ಯ ಜಿಲ್ಲೆ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಕಳೆದ ಹತ್ತಾರು ವರ್ಷಗಳಿಗೆ ಹೋಲಿಸಿದರೆ, ಇವತ್ತಿಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಸಾಕಷ್ಟು ತಲೆ ಎತ್ತಿವೆ. ಇಲ್ಲಿಯ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ತಲುಪಿರುವ ಸಾಕಷ್ಟು ನಿದರ್ಶನಗಳಿವೆ. ಮಂಡ್ಯದ ಕನ್ನಡದ ಆಂಗ್ಲ ಶಿಕ್ಷಣವನ್ನು ಕಲಿತು ಮಹತ್ವದ ಸಾಧನೆ ಮಾಡಿರುವುದು ಗಮನ ಸೆಳೆದಿದೆ. ಹೀಗಿದ್ದರೂ, ಪೋಷಕ ವರ್ಗ, ಶಾಲಾ ವಾತಾವರಣದಲ್ಲಿ ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆಯೇ ವಿನಃ ಇಂಗ್ಲಿಷ್‌ನ ಪ್ರಭಾವ ಕೌಟುಂಬಿಕ ವಾತಾವರಣದಲ್ಲಿ ಕಂಡುಬಂದಿಲ್ಲ.

ಕನ್ನಡ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ:

ಇದರ ಜೊತೆಗೆ ಕನ್ನಡಪರ ಸಂಘಟನೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ನಿರಂತರವಾಗಿ ಕನ್ನಡ ಅಭಿವೃದ್ಧಿಗೆ ಪೂರಕವಾದ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗುವಂತಹ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡೇ ಬರುತ್ತಿವೆ. ಅದರಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕನ್ನಡಕ್ಕೆ ಅನ್ಯಾಯವಾದಂತಹ ಸಂದರ್ಭಗಳೆಲ್ಲಾ ಸಂಘಟನೆಗಳು ಧನಿ ಎತ್ತಿ ಸರ್ಕಾರವನ್ನು ಎಚ್ಚರಿಸುವ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗಳ ಜೊತೆಗೆ ಕನ್ನಡಿಗರ ಜಿಲ್ಲೆ ಮಂಡ್ಯದಲ್ಲಿ ಎರಡು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು, ಮತ್ತೊಂದು ಸಮ್ಮೇಳನದ ಸಿದ್ಧತೆ ಆರಂಭಗೊಂಡಿರುವುದು ವಿಶೇಷವಾಗಿದೆ.

ಮಂಡ್ಯ ಜಿಲ್ಲೆಯ ಗಡಿ ಪ್ರಾಂತ್ಯದಲ್ಲಿ ಯಾವುದೇ ಅನ್ಯ ಭಾಷಿಗರ ದಬ್ಬಾಳಿಕೆ, ಪ್ರಭಾವ ಅಥವಾ ಸಂಘರ್ಷಗಳು ಇಲ್ಲದಿರುವುದರಿಂದಲೂ ಇಲ್ಲಿ ಕನ್ನಡದ ಸುರಕ್ಷತೆ ಯಶಸ್ವಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಒಟ್ಟಾರೆ ಮಂಡ್ಯ ಜಿಲ್ಲೆ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವುದರಲ್ಲಿ ಕನ್ನಡದ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ಹಾಗೂ ಕನ್ನಡತನವನ್ನು ಎತ್ತಿ ಹಿಡಿಯುವಲ್ಲಿ ರಾಜ್ಯದಲ್ಲೇ ಅಗ್ರಸ್ಥಾನವನ್ನು ಹೊಂದಿರುವುದು ಪ್ರತಿಯೊಬ್ಬ ಮಂಡ್ಯನ್ನರ ಹೆಮ್ಮೆಯಾಗಿದೆ.