ಧಾರವಾಡ:
ಹೈದರಾಬಾದ್ ಕರ್ನಾಟಕದಲ್ಲಿ ಉರ್ದು ಭಾಷೆಯ ಪ್ರಭಾವದ ನಡುವೆಯೂ ಕನ್ನಡ ಫಸಲನ್ನು ಬೆಳೆದವರು ಗಜಲ ಕವಿ ಶಾಂತರಸರು. ಸ್ವಭಾವದಿಂದ ನಿಷ್ಠುರವಾದಿ ಮತ್ತು ಕನ್ನಡ ಪ್ರೇಮಿಯಾಗಿದ್ದವರು ಎಂದು ಹಿರಿಯ ಸಾಹಿತಿ ಮತ್ತು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಟ್ರಸ್ಟ್ ಅಧ್ಯಕ್ಷ ಡಾ. ರಂಜಾನ ದರ್ಗಾ ಅಭಿಪ್ರಾಯಪಟ್ಟರು.ಇಲ್ಲಿನ ಕೆಪಿಇಎಸ್ ಕಾನೂನು ಕಾಲೇಜಿನಲ್ಲಿ ಕಲ್ಪತರು ಮಹಿಳಾ ಸಂಘ, ಗಣಕ ರಂಗ, ಸಂಸ ಥೀಯೇಟರ್ ಸಂಸ್ಥೆಗಳು ಆಯೋಜಿಸಿದ್ದ ಕನ್ನಡದ ಗಜಲ ಕವಿ ದಿ. ಶಾಂತರಸ ಹೆಂಬೆರಾಳು ನೆನಪಿನ ಕಾರ್ಯಕ್ರಮ “ಶಾಂತರಸ ಗಜಲ ವಾಚನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಥಾನಿಕ ಸಂಪಾದಕನಾಗಿ ಅಂದಿನ ಹೈದರಾಬಾದ್ ಕರ್ನಾಟಕ ಸೇವೆಯಲ್ಲಿದ್ದಾಗ ನನಗೆ ಶಾಂತರಸರೊಂದಿಗೆ 30 ವರ್ಷಗಳ ಒಡನಾಟವಿತ್ತು. ಕನ್ನಡ ಸಾಹಿತ್ಯಕ್ಕೆ ಗಜಲ್ ಗಮಲನ್ನು ಪರಿಚಯಿಸಿದ ಪ್ರಯೋಗಶೀಲರು. ಉತ್ತಮ ಕೆಲಸಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಹಿರಿತನದ ದೊಡ್ಡ ಗುಣ ಅವರಲ್ಲಿತ್ತು. ಅದೇ ಸಮಯಕ್ಕೆ ತಪ್ಪು ಮಾಡಿದಾಗ ಮುಲಾಜಿಲ್ಲದಂತೆ ಜಾಡಿಸುವ ನಿಷ್ಠುರತನ ಮತ್ತು ಮುಖ್ಯವಾಗಿ ಜಾತ್ಯತೀತ ಮನೋಭಾವ ಅವರಲ್ಲಿತ್ತು. ಅಂಥವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿರುವ ಮೂರು ಸಂಸ್ಥೆಗಳ ಎಲ್ಲರೂ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗಣಕರಂಗ ಸಂಸ್ಥೆಯ ಸಿದ್ಧರಾಮ ಹಿಪ್ಪರಗಿ ಪ್ರಾಸ್ತಾವಿಕ ಮಾತನಾಡಿದರು. ಸುಧಾ ಕಬ್ಬೂರ ನಿರೂಪಿಸಿದರು. ಕಲ್ಪತರು ಮಹಿಳಾ ಸಂಘದ ಆರತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಳಕ ಕೆಇ ಬೋರ್ಡ್ ಪ್ರಥಮ ದರ್ಜೆ ಕಾಲೇಜು, ಜೆಎಸ್‌ಎಸ್ ಶ್ರೀಮಂಜುನಾಥೇಶ್ವರ ಶಿಕ್ಷಣ ಕಾಲೇಜು, ಕಲ್ಲವ್ವ ಶಿವಪ್ಪಣ್ಣ ಜಿಗಳೂರು ಕಲಾ ಮತ್ತು ಡಾ. ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜು ಮುಂತಾದ ಕಾಲೇಜುಗಳ ವಿದ್ಯಾರ್ಥಿಗಳು ಶಾಂತರಸರ ಗಜಲ್ ವಾಚನವನ್ನು ಉತ್ಸಾಹದಿಂದ ಮಾಡಿದರು. ವಿದ್ಯಾರ್ಥಿಗಳಿಗೆ ಪುಸ್ತಕ ಪ್ರಮಾಣಪತ್ರ ವಿತರಿಸಲಾಯಿತು. ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ದೀಪಾ ಪಾಟೀಲ, ಲತಾ ಮಂಟಾ, ಪ್ರಿಯಾ ಬಳ್ಳಾರಿ, ಬಸವರಾಜ ಕುಂದರಗಿ, ಅಶೋಕ ಹೊನಕೇರಿ, ಭಾರತಿ ದಿಕ್ಷಿತ್, ಮಾಧುರಿ ಕುಲಕರ್ಣಿ, ಇಂದಿರಾ ಮೂಟೆಬೆನ್ನೂರ ಮುಂತಾದವರು ಉಪಸ್ಥಿತರಿದ್ದರು.