ಸರಳಾದೇವಿ ಕಾಲೇಜಿನ ಪಿಜಿಯಲ್ಲಿ ಕನ್ನಡ ವಿಭಾಗವೇ ಶುರುವಾಗಿಲ್ಲ!

| Published : Feb 20 2025, 12:47 AM IST

ಸರಳಾದೇವಿ ಕಾಲೇಜಿನ ಪಿಜಿಯಲ್ಲಿ ಕನ್ನಡ ವಿಭಾಗವೇ ಶುರುವಾಗಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲಿಚ್ಛಿಸುವ ನೂರಾರು ವಿದ್ಯಾರ್ಥಿಗಳಿದ್ದಾರೆ.

ಕನ್ನಡ ವಿಷಯದ ಸ್ನಾತಕೋತ್ತರ ಅಧ್ಯಯನಕ್ಕೆ ವಿದ್ಯಾರ್ಥಿಗಳ ಪರದಾಟ

ಬಳ್ಳಾರಿ ವಿವಿಯ ಪಿಜಿಯಲ್ಲಿ ಕನ್ನಡ ವಿಭಾಗವಿದ್ದರೂ ಖಾಯಂ ಅಧ್ಯಾಪಕರಿಲ್ಲ

ಕನ್ನಡ ವಿಭಾಗ ಆರಂಭಿಸುವಂತೆ ಸರ್ಕಾರ ಒಪ್ಪಿಗೆ ಸೂಚಿಸಿದರೂ ಕಾಳಜಿ ತೆಗೆದುಕೊಳ್ಳುವವರಿಲ್ಲ

2012ರಲ್ಲಿಯೇ ಸರ್ಕಾರದಿಂದ ಬಂದಿದೆ ಆದೇಶ; ವಿಭಾಗ ಆರಂಭಕ್ಕೆ ಯಾಕೆ ಮೀನಾ-ಮೇಷ?

ಕಾಲೇಜಿನತ್ತ ಇಣುಕು ನೋಡದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ

ಮಂಜುನಾಥ ಕೆ.ಎಂ.

ಕನ್ನಡಪ್ರಭವಾರ್ತೆ ಬಳ್ಳಾರಿ

ಇಲ್ಲಿನ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲಿಚ್ಛಿಸುವ ನೂರಾರು ವಿದ್ಯಾರ್ಥಿಗಳಿದ್ದಾರೆ. ಆದರೆ, ಕನ್ನಡ ವಿಭಾಗವೇ ಇಲ್ಲ. ಇನ್ನು ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊತ್ತು ಶುರುವಾದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗವಿದೆಯಾದರೂ, ಬೋಧನೆ ಮಾಡಲು ಕಾಯಂ ಕನ್ನಡ ಪ್ರಾಧ್ಯಾಪಕರಿಲ್ಲ!

ಶೈಕ್ಷಣಿಕವಾಗಿ ಹಿಂದುಳಿದ ಪಟ್ಟಿಗೆ ಸೇರಿದ, ಎಲ್ಲವೂ ಇದ್ದೂ ಏನೂ ಇಲ್ಲದ ಹಂತ ತಲುಪಿರುವ ಗಡಿನಾಡಿನ ಖ್ಯಾತಿಯ ಅಖಂಡ ಬಳ್ಳಾರಿ ಜಿಲ್ಲೆಯ ಸ್ಥಿತಿಯಿದು.

ಕನ್ನಡ ವಿಭಾಗದ ಆರಂಭಕ್ಕೆ ಸರಳಾದೇವಿ ಕಾಲೇಜಿನ ಈ ಹಿಂದಿನ ಪ್ರಾಂಶುಪಾಲರುಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಕಾಲೇಜಿನಲ್ಲಿ ಏನು ನಡೆಯುತ್ತಿದೆ ಎಂದು ಇಣುಕು ಹಾಕದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿಯೇ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಭವಿಷ್ಯ ಕಟ್ಟಿಕೊಳ್ಳುವ ಕನಸು ಹೊತ್ತ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಅಲೆದಾಡಬೇಕಾಗಿದೆ.

ಸರ್ಕಾರಿ ಕಾಲೇಜಿನಲ್ಲಿಲ್ಲ ಕನ್ನಡ ವಿಭಾಗ:

ಕಲ್ಯಾಣ ಕರ್ನಾಟಕದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ರಾಜ್ಯದ ಎರಡನೇ ಅತಿ ದೊಡ್ಡ ಪದವಿ ಕಾಲೇಜು ಎನಿಸಿದ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಸೇರಿದಂತೆ 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದೇ ಕಾಲೇಜಿನಲ್ಲಿ 2007-2008ನೇ ಸಾಲಿನಲ್ಲಿ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣ ಆರಂಭಿಸಲಾಗಿದ್ದು, ಸದ್ಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಸೇರಿದಂತೆ ಎಂಕಾಂ, ಎಂಎಸ್ಸಿ ಭೌತಶಾಸ್ತ್ರದ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಆದರೆ, ಕನ್ನಡ ವಿಭಾಗ ಆರಂಭಿಸಲು ಈವರೆಗೆ ಯಾರೊಬ್ಬರೂ ಕಾಳಜಿ ತೆಗೆದುಕೊಂಡಿಲ್ಲ. ಬಳ್ಳಾರಿಯಲ್ಲಿಯೇ ಇರುವ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡೋಣ ಎಂದುಕೊಂಡರೆ ವಿವಿಯಲ್ಲಿ ಖಾಯಂ ಅಧ್ಯಾಪಕರು ಈವರೆಗೆ ನೇಮಕವಾಗಿಲ್ಲ. ಅತಿಥಿ ಉಪನ್ಯಾಸಕರ ಮೇಲೆಯೇ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಅವಲಂಬನೆಯಾಗಿದ್ದು ಗುಣಮಟ್ಟದ ಶಿಕ್ಷಣಕ್ಕೆ ಧಕ್ಕೆಯಾಗಿದೆ. ಹೀಗಾಗಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ದೂರದ ಊರುಗಳಿಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

2012ರಲ್ಲಿಯೇ ಆದೇಶ ಬಂದಿದೆ:

ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿಜಿಯಲ್ಲಿ ಕನ್ನಡ ವಿಭಾಗ ಆರಂಭಿಸುವಂತೆ 2012ರ ಜೂ.4ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಉನ್ನತ ಶಿಕ್ಷಣ) ಕಾಲೇಜಿಗೆ ಹೊಸ ಕೋರ್ಸ್ ಮಂಜೂರು ಮಾಡಿ ಆದೇಶಿಸಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜು ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳಿಗೆ ಬೇಡಿಕೆಯಿರುವ ಹೊಸ ಕೋರ್ಸ್‌ಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹೊಸ ಕೋರ್ಸ್‌ಗಳು ಶುರುಗೊಂಡಿವೆಯಾದರೂ ಬಳ್ಳಾರಿ ಕಾಲೇಜಿನಲ್ಲಿ ಕನ್ನಡ ವಿಭಾಗ ಆರಂಭಗೊಳ್ಳಲೇ ಇಲ್ಲ. ವಿಪರ್ಯಾಸ ಎಂದರೆ ಸರ್ಕಾರದ ಆದೇಶ ಬಂದ ಬಳಿಕ ಕಾಲೇಜಿನಲ್ಲಿ ಏಳು ಜನ ಪ್ರಾಂಶುಪಾಲರು ಬದಲಾಗಿದ್ದಾರಾದರೂ ಕನ್ನಡ ವಿಭಾಗ ಆರಂಭಿಸಬೇಕು ಎಂಬ ಕಾಳಜಿ ಯಾರಲ್ಲೂ ಕಂಡು ಬಂದಿಲ್ಲ. ಇದರಿಂದ ಪದವಿಯಲ್ಲಿ ಐಚ್ಛಿಕ ಕನ್ನಡ ಪಡೆದು ಸ್ನಾತಕೋತ್ತರ ಅಧ್ಯಯನಕ್ಕಾಗಿ ಹಾತೊರೆಯುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಭಾಗ್ಯ ಕೂಡಿ ಬಂದಿಲ್ಲ.

ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ

ನಾನು ಪ್ರಾಂಶುಪಾಲನಾಗಿ ಅಧಿಕಾರ ವಹಿಸಿಕೊಂಡು ಬರೀ ಒಂದುವರೆ ತಿಂಗಳಷ್ಟೇ ಆಗಿದೆ. ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ವಿಭಾಗ ಆರಂಭಿಸುತ್ತೇವೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಹ್ಲಾದ ಚೌದರಿ ತಿಳಿಸಿದ್ದಾರೆ.

ನಮ್ಮಲ್ಲಿ ಉಪನ್ಯಾಸಕರ ಕೊರತೆಯಿಲ್ಲ. ನಾಲ್ವರು ಕಾಯಂ ಬೋಧಕರು ಹಾಗೂ ಅಗತ್ಯ ಮೂಲ ಸೌಕರ್ಯಗಳಿವೆ. ಈ ಹಿಂದೆ ಯಾಕೆ ವಿಭಾಗ ಆರಂಭಮಾಡಿಲ್ಲ ಎಂಬುದು ತಿಳಿದಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಇದೇ ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗುವುದು. ಬಳ್ಳಾರಿ ವಿವಿಯಲ್ಲಿ ಸ್ನಾತಕೋತ್ತರ ವಿಭಾಗವಿದೆಯಾದರೂ ಅಲ್ಲಿಗಿಂತಲೂ ನಮ್ಮಲ್ಲಿ ಶುಲ್ಕ ಕಡಿಮೆಯಾಗಲಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.