ಕನ್ನಡ ಶ್ರೀಮಂತ ಭಾಷೆ: ಶಾಸಕ ಕೃಷ್ಣನಾಯ್ಕ

| Published : Oct 24 2024, 12:50 AM IST / Updated: Oct 24 2024, 12:51 AM IST

ಸಾರಾಂಶ

ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿರುವ ಕನ್ನಡ ಸಾಹಿತ್ಯ ಲೋಕ ವಿಶ್ವದಲ್ಲೇ ಶ್ರೇಷ್ಠ ಸ್ಥಾನಮಾನ ಹೊಂದಿದೆ.

ಹೂವಿನಹಡಗಲಿ: ಕನ್ನಡ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿ ಹೆಚ್ಚು ಶ್ರೀಮಂತವಾಗಿದೆ ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ತಾಲೂಕ ಕಚೇರಿ ಎದುರು ತಾಲೂಕು ಆಡಳಿತ ವತಿಯಿಂದ, ಕನ್ನಡ ರಾಜ್ಯೋತ್ಸವ ಅಂಗವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಯಾತ್ರೆಗೆ, ಕನ್ನಡ ಬಾವುಟ ಹಿಡಿದು ತಾಲೂಕಿಗೆ ಸ್ವಾಗತಿಸಿ ಅವರು ಮಾತನಾಡಿದರು.

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ, ಪ್ರಚಾರದ ಸಲುವಾಗಿ ಕನ್ನಡ ರಥಯಾತ್ರೆ ಕನ್ನಡ ಸಾಹಿತ್ಯ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಪ್ರತೀಕವಾಗಿದೆ ಎಂದು ಹೇಳಿದರು.

ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿರುವ ಕನ್ನಡ ಸಾಹಿತ್ಯ ಲೋಕ ವಿಶ್ವದಲ್ಲೇ ಶ್ರೇಷ್ಠ ಸ್ಥಾನಮಾನ ಹೊಂದಿದೆ. ಆದರಿಂದ ಎಲ್ಲರೂ ಕನ್ನಡ ಭಾಷೆ ಉಳಿಸಿ ಬೆಳೆಸುವ ಜತೆಗೆ, ಕನ್ನಡ ಸಾಹಿತ್ಯ ಕುರಿತಾಗಿರುವ ಪುಸ್ತಕಗಳನ್ನು ಹೆಚ್ಚು ಅಧ್ಯಾಯನ ಮಾಡಬೇಕಿದೆ. ಇಂದಿನ ಯುವ ಪೀಳಿಗೆಗೆ ಈ ಕುರಿತು ಮಾಹಿತಿ ಹಂಚಿಕಬೇಕೆಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭಾ ಮಾಜಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ. ವೀರೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಅಶೋಕ, ಕಸಾಪ ಮಾಜಿ ಅಧ್ಯಕ್ಷ ಎಚ್.ಜಿ.ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ, ಸಿಡಿಪಿಒ ರಾಮನಗೌಡ , ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಂಬೇಡ್ಕರ್‌, ಕಾರ್ಯದರ್ಶಿ ಎಂ.ಪಿ.ಎಂ. ಚನ್ನವೀರಯ್ಯ, ಚುಸಾಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕನ್ನಡ ರಥಯಾತ್ರೆಯು ಪಟ್ಟಣ ಮುಖ್ಯ ಬೀದಿಗಳಲ್ಲಿ ಸೇರಿದಂತೆ ವಾಲ್ಮೀಕಿ ವೃತ್ತದಲ್ಲಿ, ತುಂಗಭದ್ರ ಪ್ರೌಢಶಾಲೆ, ಲಿಟ್ಲ್ ಚಾಂಪ್ಸ್ ಪ್ರೌಢಶಾಲಾ ಮಕ್ಕಳು ಶಿಕ್ಷಕರು ಕನ್ನಡ ಬಾವುಟ ಹಿಡಿದು ಸ್ವಾಗತಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಲಾಲ್ ಬಹಾದುರ್ ಶಾಸ್ತ್ರಿ ವೃತ್ತದ ಮಾರ್ಗವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.