ಸಾರಾಂಶ
ಅರಸೀಕೆರೆ: ಎಸ್ಎಸ್ಎಲ್ ಸಿ ಪರೀಕ್ಷೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸುವುದರೊಂದಿಗೆ ಉತ್ತೀರ್ಣಳಾಗಿದ್ದ ನಗರದ ಚಂದ್ರಶೇಖರ ಭಾರತಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಸಾಯಿ ಲೇಖನಳ ಸಾಧನೆಯನ್ನು ಗುರುತಿಸಿ, ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ ಮಾಡುವುದರೊಂದಿಗೆ ಗೌರವಿಸಿದೆ. ರಾಜ್ಯದ ಪ್ರತಿಷ್ಠಿತ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರಕ್ಕೆ ಭಾಜನವಾಗಿರುವ ಸಾಯಲೇಖನ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮಾತೃಭಾಷೆ ದರ್ಜಿಯಾಗಿದ್ದರೂ ಬಹುತೇಕ ನಾವು ಮನೆಯಲ್ಲಿ ಕನ್ನಡದಲ್ಲೇ ಮಾತನಾಡುತ್ತೇವೆ. ಅದರಲ್ಲೂ ನನಗಂತೂ ಕನ್ನಡ ಓದುವುದು, ಬರೆಯುವುದು, ಮಾತನಾಡುವುದೆಂದರೆ ವೈಯಕ್ತಿಕವಾಗಿ ಹೆಮ್ಮೆ ಅನಿಸುತ್ತದೆ. ಇಂದು ಕನ್ನಡದ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದಿರುವುದರ ಹಿಂದೆ ನನ್ನ ಅಪ್ಪ, ಅಮ್ಮನ ಜತೆಗೆ ನನ್ನ ಶಾಲೆಯ ಅಧ್ಯಾಪಕ ವೃಂದ ನೀಡಿದ ಮಾರ್ಗದರ್ಶನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗುರುತರ ಸಾಧನೆ ಮಾಡುವ ಹಂಬಲ ಇದೆ ಎಂದು ತನ್ನ ಮನದಾಳದ ಮಾತನ್ನು ಹಂಚಿಕೊಂಡಳು. ಮಗಳ ಸಾಧನೆ ಕುರಿತು ಮಾತನಾಡಿದ ತಂದೆ ಹೇಮಂತ್ ಕುಮಾರ್, ಬಾಲ್ಯದಿಂದಲೂ ನನ್ನ ಮಗಳು ವಿದ್ಯಾಭ್ಯಾಸದಲ್ಲಿ ಮುಂದಿದ್ದು, ಅದರಲ್ಲೂ ಕನ್ನಡ ಭಾಷೆಯ ಬಗ್ಗೆ ಅವಳಗಿರುವ ಜ್ಞಾನ ಒಬ್ಬ ತಂದೆಯಾಗಿ ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಸಂತಸಪಟ್ಟರು.