ಕನ್ನಡದ ಗಡಿಯಾಚೆಯೂ ಭಾಷೆ ಉಳಿವು ಅಗತ್ಯ

| Published : Apr 25 2025, 11:45 PM IST

ಸಾರಾಂಶ

ಕನ್ನಡಭಾಷೆ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಕನ್ನಡದ ಗಡಿ ದಾಟಿಯೂ ಉಳಿಸಬೇಕಾಗಿದೆ

ಕನ್ನಡಪ್ರಭ ವಾರ್ತೆ ಕಾಗವಾಡ

ಗಡಿನಾಡಿನಲ್ಲಿ ಕನ್ನಡ ಉಳಿದರೆ ಮಾತ್ರ ಒಳನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯ. ಕನ್ನಡಭಾಷೆ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಕನ್ನಡದ ಗಡಿ ದಾಟಿಯೂ ಉಳಿಸಬೇಕಾಗಿದೆ ಎಂದು ಮಹಾರಾಷ್ಟ್ರದ ಅಕ್ಕಲಕೋಟಿನ ಹಿರಿಯ ವಿದ್ವಾಂಸ ಡಾ.ಗುರುಲಿಂಗಪ್ಪಾ ದಬಾಲೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಕರ್ನಾಟಕ ಗಡಿ ಪ್ರದೇಶ ಅಭಿವೃಧ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಶಿವಾನಂದ ಮಹಾವಿದ್ಯಾಲಯ ಕಾಗವಾಡ ಸಹಯೋಗದಲ್ಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಕನ್ನಡ ನಾಡಿನ ಸಾಹಿತ್ಯ, ಅದರ ಐತಿಹಾಸಿಕ ಅಸ್ಮಿತೆ ಕಾವೇರಿಯಿಂದ ನರ್ಮದಾವರೆಗೆ ಹಬ್ಬಿದೆ. ಕದಂಬರು, ಶಾತವಾಹನರ ಕಾಲದಿಂದ ಎರಡುವರೆ ಸಾವಿರ ವರ್ಷಗಳ ಇತಿಹಾಸದೊಂದಿಗೆ ಕನ್ನಡ ಭಾಷೆ ಶ್ರೀಮಂತಿಕೆ ಹೊಂದಿದೆ. ನಮ್ಮ ಅಸ್ಮಿತೆ ಉಳಿಸಿಕೋಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಉಳಿಸಿ, ಬೆಳೆಸಲು ಅಗಾಧವಾದ ಪ್ರಯತ್ನ ಮಾಡಬೇಕು. ನಮ್ಮತನ ನಮ್ಮ ಪ್ರಾದೇಶಿಕತೆಯನ್ನು ನಾವೇ ಸಮೃದ್ಧಗೊಳಿಸಬೇಕಾಗಿದೆ. ಇತಿಹಾಸದಲ್ಲಿ ಕ್ರಿ.ಶ 11ನೇ ಶತಮಾನದ ವರೆಗೆ ಕನ್ನಡಿಗರೆ ಕನ್ನಡ ರಾಜ್ಯ ಆಳಿದ್ದಾರೆ. ಇವತ್ತು ನಾವು ನಮ್ಮ ಭಾಷಾ ಸಮೃದ್ಧಿ ಕಾಯ್ದುಕೊಂಡು ಶ್ರೀಮಂತರಾಗಬೇಕಾಗಿದೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾವಿದ್ಯಾಲಯದ ಪೂಜ್ಯರು ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಮಾತೃಭಾಷೆ ಸಂರಕ್ಷಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ. ಕನ್ನಡ ಉಳಿಸಿ, ಬೆಳೆಸಿ ಬಿತ್ತ ಬೇಕಾಗಿದೆ. ಹಿರಿಯರು ಮತ್ತು ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹೆಮ್ಮೆಯಿಂದ ಇರಬೇಕಾಗಿದೆ. ಸುಮಾರು 135 ವರ್ಷಗಳ ಇತಿಹಾಸ ಇರುವ ನಮ್ಮ ಸಂಸ್ಥೆ ಗಡಿಭಾಗಗಳಲ್ಲಿ ಕನ್ನಡಿಗರಿಗೆ ಸ್ಫೂರ್ತಿ ನೀಡುತ್ತಿದೆ ಎಂದರು.

ತಾಲೂಕು ದಂಡಾಧಿಕಾರಿ ರಾಜೇಶ ಬುರ್ಲಿ ಮಾತನಾಡಿ, ಈ ಕಾರ್ಯಕ್ರಮ ರೋಮಾಂಚಕಾರಿಯಾಗಿದ್ದು ನಮ್ಮೆಲ್ಲರಿಗೆ ಹರ್ಷದ ವಿಷಯ. ಈ ರೀತಿಯ ಕಾರ್ಯಕ್ರಮಗಳಿಗೆ ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು. ದಿವ್ಯ ಸಾನ್ನಿಧ್ಯ ವಹಿಸಿದ ಸಂಸ್ಥೆಯ ಶ್ರೀ ಯತೀಶ್ವರಾನಂದ ಸ್ವಾಮೀಜಿ ಆಶೀರ್ವಚಿಸಿದರು.

ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಸ್ವಾಗತಿಸಿ, ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಕನ್ನಡ ಗೀತೆ ಹಾಡಿದರು. ಪ್ರೊ.ಚಂದ್ರಶೇಖರ ವೈ ವಂದಿಸಿ, ಪ್ರೊ.ಎಸ್.ಎಸ್.ಫಡತರೆ ನಿರೂಪಿಸಿದರು. ಕಾಗವಾಡ ಬಿಇಒ ಎಸ್.ಆರ್.ಮುಂಜೆ, ಸಂಜೀವಕುಮಾರ ಸದಲಗೆ, ಪ್ರೊ.ಬಿ.ಎ. ಪಾಟೀಲ, ಮೇಜರ್ ವ್ಹಿ.ಎಸ್.ತುಗಶೆಟ್ಟಿ, ಜ್ಯೋತಿಕುಮಾರ ಪಾಟೀಲ ಹಾಗೂ ತಾಲೂಕಿನ ಕಸಾಪ ಅಧ್ಯಕ್ಷ ಡಾ.ಸಿದ್ಧಗೌಡ ಕಾಗೆ ಹಾಗೂ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಧಾರವಾಡ ಸಾಹಿತ್ಯ ಅಭಿಮಾನಿಗಳು, ಕಾಲೆಜೀನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಕನ್ನಡಿಗರು ಉಪಸ್ಥಿತರಿದ್ದರು.