21ರಂದು ಕನ್ನಡ ಸಾಹಿತ್ಯ ಸಮ್ಮೇಳನ

| Published : Feb 05 2024, 01:47 AM IST

ಸಾರಾಂಶ

ಫೆ.21 ರಂದು ಗುಡಿಬಂಡೆಯಲ್ಲಿ ತಾಲೂಕು ಮಟ್ಟದ ಕನ್ನಡ ಹಬ್ಬಕ್ಕೆ ಪ್ರತಿಯೊಬ್ಬರೂ ಸಹ ಭಾಗವಹಿಸಬೇಕು. ಈ ಬಾರಿ ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನ ಮಾಡಲು ಗುಡಿಬಂಡೆ ಸಾರ್ವಜನಿಕರು ಸಹಕರಿಸಬೇಕು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಕೋವಿಡ್ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಕಾಲ ಗುಡಿಬಂಡೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ಎಲ್ಲರ ಸರ್ವಾನುಮತದ ಮೇರೆಗೆ ಫೆ.21 ರಂದು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿದ್ದು, ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಶಾಸಕ ಸುಬ್ಬಾರೆಡ್ಡಿ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡ ಹಬ್ಬದಲ್ಲಿ ಭಾಗಿಯಾಗಿ

ಕೆಲವೊಂದು ಜಾತಿಗಳ ಹಬ್ಬಗಳಂದು ಬೆಳಗಿನಿಂದಲೇ ಮೆರವಣಿಗೆ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಆದರೆ ರಾಷ್ಟ್ರೀಯ ಹಬ್ಬಗಳು, ಕನ್ನಡ ಹಬ್ಬಗಳಲ್ಲಿ ಸರ್ಕಾರಿ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗಿಯಾಗುತ್ತಾರೆ. ಇದು ಸರಿಯಲ್ಲ, ಕನ್ನಡ ಹಬ್ಬಕ್ಕೆ ಪ್ರತಿಯೊಬ್ಬರೂ ಸಹ ಭಾಗವಹಿಸಬೇಕು. ಈ ಬಾರಿ ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನ ಮಾಡಲು ಗುಡಿಬಂಡೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಸಮ್ಮೇಳನ ಯಶಸ್ವಿಗೊಳಿಸಿ

ಕಸಾಪ ತಾಲೂಕು ಅಧ್ಯಕ್ಷ ಸುಬ್ಬರಾಯಪ್ಪ ಮಾತನಾಡಿ, ಫೆ.21 ರಂದು ಗುಡಿಬಂಡೆಯಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಎಲ್ಲರೂ ತೀರ್ಮಾನಿಸಲಾಗಿದೆ. ಈ ಹಬ್ಬಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕಾರ್ಯಕ್ರಮವನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಯಶ್ವಸಿಗೊಳಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ಸಹ ರಚನೆ ಮಾಡಲಾಗುವುದು. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಪಪಂ ಮಾಜಿ ಅಧ್ಯಕ್ಷ ದ್ವಾರಕನಾಥನಾಯ್ಡು, ತಹಸೀಲ್ದಾರ್ ಮನಿಷಾ, ತಾಪಂ ಇಒ ಹೇಮಾವತಿ, ಕಸಾಪ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.