ಕೇರಳದಲ್ಲಿ ಮಲಯಾಳಂ ಭಾಷೆಯ ಭರಾಟೆಯ ನಡುವೆ ಕನ್ನಡ ಭಾಷೆ ಉಳಿವಿಗೆ ನಿರಂತರ ಹೋರಾಟ ನಡೆಸುತ್ತಿರುವ ಗಡಿನಾಡು ಕಾಸರಗೋಡಿನಲ್ಲಿ ಈಗ ಕನ್ನಡಪತ್ರಿಕೆ ಪ್ರಸರಣ ಉಳಿಸಲು ‘ಮನೆ ಮನೆಗೆ ಕನ್ನಡ ಪತ್ರಿಕೆ ಅಭಿಯಾನ’ಕ್ಕೆ ಕನ್ನಡಪರ ಸಂಘಟನೆಗಳು ಕೈಹಾಕಿವೆ. ಈ ಅಭಿಯಾನವನ್ನು ಕರ್ನಾಟಕದಲ್ಲೂ ಮುಂದುವರಿಸಲು ಸಂಘಟನೆಗಳು ನಿರ್ಧಾರ ಕೈಗೊಂಡಿವೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಕೇರಳದಲ್ಲಿ ಮಲಯಾಳಂ ಭಾಷೆಯ ಭರಾಟೆಯ ನಡುವೆ ಕನ್ನಡ ಭಾಷೆ ಉಳಿವಿಗೆ ನಿರಂತರ ಹೋರಾಟ ನಡೆಸುತ್ತಿರುವ ಗಡಿನಾಡು ಕಾಸರಗೋಡಿನಲ್ಲಿ ಈಗ ಕನ್ನಡಪತ್ರಿಕೆ ಪ್ರಸರಣ ಉಳಿಸಲು ‘ಮನೆ ಮನೆಗೆ ಕನ್ನಡ ಪತ್ರಿಕೆ ಅಭಿಯಾನ’ಕ್ಕೆ ಕನ್ನಡಪರ ಸಂಘಟನೆಗಳು ಕೈಹಾಕಿವೆ. ಈ ಅಭಿಯಾನವನ್ನು ಕರ್ನಾಟಕದಲ್ಲೂ ಮುಂದುವರಿಸಲು ಸಂಘಟನೆಗಳು ನಿರ್ಧಾರ ಕೈಗೊಂಡಿವೆ.

ಕನ್ನಡ ನೆಲ ಕರ್ನಾಟಕದಲ್ಲೇ ಕನ್ನಡ ಪತ್ರಿಕೆ ಓದುಗರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಅಂಥದ್ದರಲ್ಲಿ ಮಲಯಾಳಂ ಮಾತೃ ಭಾಷೆಯೇ ಪ್ರಧಾನ ಆಗಿರುವ ಕೇರಳಂ ರಾಜ್ಯದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಕ್ಕೆ ನಿರಂತರ ಹೊಡೆತಗಳು ಬೀಳುತ್ತಲೇ ಇದೆ. ಅಂಗನವಾಡಿಯಿಂದ ತೊಡಗಿ ಶಾಲಾ ಕಾಲೇಜು ಮಾತ್ರವಲ್ಲ ಕಚೇರಿಗಳಲ್ಲೂ ಕನ್ನಡಕ್ಕೆ ಕಂಟಕ ತರುವ ವಿದ್ಯಮಾನಗಳು ಆಗಿಂದಾಗೆ ನಡೆಯುತ್ತಲೇ ಇದೆ. ಈ ನಡುವೆ ಕನ್ನಡ ಪತ್ರಿಕೆಗಳನ್ನು ಓದುವ ಅಭಿರುಚಿಯೇ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡಪತ್ರಿಕೆಯನ್ನು ಖರೀದಿಸಿ ಓದಬೇಕು ಎಂಬ ದಿಶೆಯಲ್ಲಿ ಪ್ರತಿ ಮನೆಗೆ ಕನ್ನಡ ಪತ್ರಿಕೆ ಹಾಕಿಸುವ ಯೋಜನೆಯನ್ನು ಕನ್ನಡಪರ ಸಂಘಟನೆಗಳು ರೂಪಿಸಿವೆ.

ಒಂದು ವರ್ಷ ಅಭಿಯಾನ:

ಸರ್ಕಾರೇತರ ಸಂಘಟನೆಯಾದ ಗಡಿನಾಡು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಈ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಆ.15ರಿಂದ ಮುಂದಿನ ಜು.1ರವರೆಗೆ ಈ ಅಭಿಯಾನವನ್ನು ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ನಡೆಸಲು ಉದ್ದೇಶಿಸಿದೆ. ಇದಕ್ಕಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಶೀಘ್ರವೇ ಭೇಟಿ ಮಾಡಿ ಶಾಲೆಗಳಲ್ಲೂ ಕಡ್ಡಾಯವಾಗಿ ಕನ್ನಡ ಪತ್ರಿಕೆ ಓದಿಗೆ ತರಗತಿಯಲ್ಲೇ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲಿದೆ.

25 ಸಾವಿರ ಮನೆಗಳ ಭೇಟಿ:

ಇದಕ್ಕಾಗಿ ಕನ್ನಡಿಗರ, ಕನ್ನಡ ಕುಟುಂಬಗಳ ಸಂಖ್ಯೆಯನ್ನು ಕ್ರೋಢೀಕರಿಸುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಆರಂಭಿಸಿವೆ. ಅಭಿಯಾನದ ಮೊದಲ ಹಂತದಲ್ಲಿ 25 ಸಾವಿರ ಮನೆಗಳಿಗೆ ಪತ್ರಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪತ್ರಿಕಾ ಏಜೆಂಟರಿಂದ ಮನೆಗಳ ಪಟ್ಟಿಯನ್ನು ಸಂಘಟನೆಗಳು ಪಡೆದುಕೊಂಡು ಮನೆ ಮನೆ ಭೇಟಿ ನೀಡಲಿದ್ದಾರೆ. ಕನ್ನಡಪತ್ರಿಕೆ ಓದುವಿಕೆ ಹಾಗೂ ಪತ್ರಿಕೆಗಳನ್ನು ಉಳಿಸಿ, ಬೆಳೆಸುವ ಅನಿವಾರ್ಯತೆಯನ್ನು ಮನದಟ್ಟು ಮಾಡಲಿದ್ದಾರೆ. -ಕೋಟ್-

ಕನ್ನಡಪತ್ರಿಕೆ ಓದುವ ಹವ್ಯಾಸವನ್ನು ಉಳಿಸಿ ಬೆಳೆಸುವ ಸಲುವಾಗಿ ‘ಮನೆ ಮನೆಗೆ ಕನ್ನಡಪತ್ರಿಕೆ’ ಅಭಿಯಾನವನ್ನು ಕಾಸರಗೋಡು ಮತ್ತು ಕರ್ನಾಟಕದಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ. ದೇಶದಲ್ಲೇ ಅಪರೂಪ ಎನ್ನಬಹುದಾದ ಅಭಿಯಾನ ಇದಾಗಿದ್ದು, ಆ.15ರ ವೇಳೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದಲೂ ಈ ಅಭಿಯಾನಕ್ಕೆ ಸಹಕಾರ ಪಡೆಯಲಾಗುವುದು.

-ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಕಾಸರಗೋಡು