ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಕಾವ್ಯಕ್ಕೆ ಹೊಸ ಶೋಭೆ ತಂದು ಕೊಟ್ಟ ಶಬ್ಧಗಾರುಡಿಗ ದ.ರಾ. ಬೇಂದ್ರೆ ಅವರು ಎಂದು ಶ್ರೀ ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಹೇಳಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಶನಿವಾರ ನಡೆದ ದ.ರಾ. ಬೇಂದ್ರೆ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡದ ಪ್ರಸಿದ್ಧ ಕವಿಗಳು. ಕನ್ನಡದ ನರ್ವೋದಯ ಚಳುವಳಿಯ ಪ್ರವರ್ತಕ ಕವಿಗಳೂ ಹಾಗೂ ಉತ್ತರ ಕರ್ನಾಟಕದ ಪ್ರದೇಶದಲ್ಲಿನ ಕನ್ನಡದ ಭಾಷಾ ಪುನರುಜ್ಜೀವನದ ಪ್ರಮುಖ ವ್ಯಕ್ತಿಗಳೂ ಆಗಿದ್ದಾರೆ. ಬೇಂದ್ರೆಯವರು ತಮ್ಮ ಮೂಲಕ ಕನ್ನಡ ಸಾಹಿತ್ಯ ಮತ್ತು ಆಧುನಿಕ ಕನ್ನಡ ಕಾವ್ಯಗಳಲ್ಲಿ ಹೊಸ ಹಾದಿಯನ್ನು ರೂಪಿಸಿದವರು. ಇವರ ಕೃತಿಗಳಲ್ಲಿ ವಿಶೇಷವಾಗಿ ದೇಸಿ ಕನ್ನಡದ ಬಳಕೆ, ಧಾರವಾಡ ಕನ್ನಡ, ಅದರಲ್ಲೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ಮಾತನಾಡುವ ಕನ್ನಡವನ್ನು ಬಳಸುತ್ತಿದ್ದರು. ತಮ್ಮ ಕಾವ್ಯದ ಶ್ರೀಮಂತ್ರಿಕೆ, ಸ್ವಂತಿಕೆ, ಉತ್ಕೃಷ್ಟತೆ ಮತ್ತು ಅವರ ವರ್ಚಸ್ಸಿನ ವ್ಯಕ್ತಿತ್ವದಿಂದಾಗಿ ಬೇಂದ್ರೆಯವರಿಗೆ ವರಕವಿ ಎಂಬ ಬಿರುದು ದೊರಕಿತು ಎಂದು ಅವರು ತಿಳಿಸಿದರು.ಮುಖ್ಯಅತಿಥಿಗಳಾಗಿ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ ಮಾತನಾಡಿ, ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಬೇಂದ್ರೆಯವರು ಇವರನ್ನು ದಾರ್ಶನಿಕ ಬೇಂದ್ರೆಯಂತಲು ಕರೆಯುವರು. ಕನ್ನಡ ಕಾವ್ಯಕ್ಕೊಂದು ಹೊಸಶೋಭೆ ತಂದುಕೊಟ್ಟ ಶಬ್ಧ ಗಾರುಡಿಗ ಎಂದರೆ ಅದು ದ.ರಾ. ಬೇಂದ್ರೆ ಅವರು ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆಯವರು ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ ಎಂದರೆ ದ.ರಾ. ಬೇಂದ್ರೆಯವರು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಎಂ. ಶಾರದ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ ಎಂ.ಎಸ್. ಸಂಧ್ಯಾರಾಣಿ, ರೇವತಿ ದ.ರಾ.ಬೇಂದ್ರೆಯವರ ನೀ ಹಿಂಗ ನೋಡಬ್ಯಾಡ ನನ್ನ ಕವಿತೆಯನ್ನು ಗಾಯನ ಮಾಡಿದರು. ನಿತ್ಯ ದ.ರಾ. ಬೇಂದ್ರೆಯವರ ನಾನು ಬಡವಿ, ಆತ ಬಡವ ಕವನವನ್ನು ವಾಚಿಸಿದರು.ಪಲ್ಲವಿ ಪ್ರಾರ್ಥಿಸಿದರು, ದೀಕ್ಷಿತಾ ಸ್ವಾಗತಿಸಿದರು, ಪಲ್ಲವಿ ನಿರೂಪಿಸಿದರೆ, ದಿವ್ಯಶ್ರೀ ವಂದಿಸಿದರು.