ಸಾರಾಂಶ
ಬೆಂಗಳೂರು : ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಬಿಳೇಕಹಳ್ಳಿಯ ವಿಜಯಬ್ಯಾಂಕ್ ಲೇಔಟ್ ಆಟದ ಮೈದಾನದಲ್ಲಿ ಆಯೋಜಿಸಿರುವ ಬೆಂಗಳೂರಿನ ಅತಿದೊಡ್ಡ ‘ಫುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್ ‘ಬೊಮ್ಮನಹಳ್ಳಿ ಸಂಭ್ರಮ’ಕ್ಕೆ ಮೊದಲ ದಿನವೇ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಶುಕ್ರವಾರ ಸಂಜೆ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಬೊಮ್ಮನಹಳ್ಳಿ ಸಂಭ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಾಯಕಿ ಶರಣ್ಯ ಶೆಟ್ಟಿ ಭಾಗವಹಿದ್ದರು. ಇದೇ ವೇಳೆ ಬೊಮ್ಮನಹಳ್ಳಿಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನಟಿ ಶರಣ್ಯ ಶೆಟ್ಟಿ ಅವರು ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಹಾಡಿಗೆ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಈ ವೇಳೆ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿಯಲ್ಲಿ ಇಂತಹ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ, ಮೂರು ದಿನಗಳ ಬೊಮ್ಮನಹಳ್ಳಿಯ ಸಂಭ್ರಮ ಕ್ಕೆ ಎಲ್ಲ ಸಹಕಾರ ಇರುತ್ತೆ. ಇಲ್ಲಿಯ ಸಾಧಕರನ್ನು ಗೌರವಿಸಿದ್ದು, ಹೆಮ್ಮೆಯ ವಿಷಯ ಎಂದರು.
ನಟಿ ಶರಣ್ಯ ಶೆಟ್ಟಿ ಮಾತನಾಡಿ, ಬೊಮ್ಮನಹಳ್ಳಿ ಸಂಭ್ರದಲ್ಲಿ ಕರ್ನಾಟಕದ ಎಲ್ಲ ವಿವಿಧ ಭಾಗದ ತಿಂಡಿ ತಿನಿಸು ತಿಂದು ಸಂತೋಷವಾಯಿತು. ಮೇಲುಕೋಟೆ ಪುಳಿಯೋಗರೆ, ಮಿರ್ಚಿ, ಸಿಹಿ ಪೊಂಗಲ್ ತುಂಬಾ ಇಷ್ಟವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಸ್ಯದ ಹೊನಲು ಹರಿಸಿದ ಗಿಚ್ಚಿ ಗಿಲಿ ಗಿಲಿ ನಟ
ಕಲರ್ಸ್ ಕನ್ನಡ ಚಾಲನ್‌ನ ಗಿಚ್ಚಿ ಗಿಲಿಗಿಲಿಯ ಖ್ಯಾತ ಹಾಸ್ಯ ಕಲಾವಿದ ಗಿಲ್ಲಿ ನಟ ನಟರಾಜ್ ಹಾಗೂ ಕಲಾವಿದ ಸಾಗರ ತುರುವೇಕೆರೆ ಅವರ ಹಾಸ್ಯ ಸಂಜೆ ಕಾರ್ಯಕ್ರಮ ಹಾಸ್ಯದ ಹೊನಲ ಹರಿಸಿ ಜನರನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿತು. ಇನ್ನು ಎರಡು ದಿನಗಳ ಕಾಲ ಬೊಮ್ಮನಹಳ್ಳಿ ಸಂಭ್ರಮ ನಡೆಯಲಿದೆ.
ಇಂದಿನ ಕಾರ್ಯಕ್ರಮ
ಶನಿವಾರ ಬೆಳಗ್ಗೆ 11ಕ್ಕೆ ಮುದ್ದುಮಗು ಮತ್ತು ವೇಷಭೂಷಣ-ಮಕ್ಕಳಿಗಾಗಿ. ಮಧ್ಯಾಹ್ನ 1ಕ್ಕೆ ಅಡುಗೆ ಮಹಾರಾಣಿ (ಮಹಿಳೆಯರಿಗೆ) 1ನೇ ಸುತ್ತು, ಮಧ್ಯಾಹ್ನ 3ಕ್ಕೆ ಓಪನ್‌ಸ್ಟೇಜ್ ಮತ್ತು ಗಾಯನ, ಸಂಜೆ 6ಕ್ಕೆ ಬೊಂಬಾಟ್ ಜೋಡಿ, ಕಿಡ್ಸ್ ಮತ್ತು ಫ್ಯಾಮಿಲಿ ಫ್ಯಾಷನ್‌ಶೋ (ಥೀಮ್-ಎಥ್ನಿಕ್), ಸಂಜೆ 7ಕ್ಕೆ ಬೊಮ್ಮನಹಳ್ಳಿ ಸಾಧಕರಿಗೆ ಸನ್ಮಾನ, 8ಕ್ಕೆ ಇಂಡಿಯನ್ ಫೋಕ್ ಮ್ಯೂಸಿಕ್ ಬ್ಯಾಂಡ್ ‘ಜಂಬೆ ಝಲಕ್’ ಬಾಲು ಮತ್ತು ತಂಡ, ರಾತ್ರಿ 9ಕ್ಕೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ.