ಶೋಚನೀಯ ಸ್ಥಿತಿಗೆ ತಲುಪಿದ ಕನ್ನಡ ಶಾಲೆಗಳು: ಸ್ವಾಮೀಜಿ

| Published : May 27 2024, 01:08 AM IST

ಸಾರಾಂಶ

ರಾಜ್ಯದ ಗಡಿ ಭಾಗದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ತಮಿಳು, ತೆಲುಗು, ಮರಾಠಿ ಭಾಷೆ ಪ್ರಭಾವ ಜಾಸ್ತಿಯಾಗಿದೆ. ಕನ್ನಡ ಉಳಿಸಿ ಬೆಳೆಸಲು ಶ್ರಮ ಪಡಬೇಕಿದೆ.

ಶಿರಸಿ: ಕನ್ನಡ ಶಾಲೆಗಳು ನಮ್ಮ ರಾಜ್ಯದಲ್ಲಿಯೇ ಶೋಚನೀಯ ಸ್ಥಿತಿಗೆ ತಲುಪಿವೆ. ಆಂಗ್ಲ ಮಾಧ್ಯಮ ಶಾಲೆಗಳು ಅಟ್ಟಹಾಸದಿಂದ ಮೆರೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡ ಮೆರೆಯಬೇಕು ಮತ್ತು ಕನ್ನಡವೇ ಆಳಬೇಕು ಎಂದು ಬಸವಕಲ್ಯಾಣ ಸಂಸ್ಥಾನ ಗವಿಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶಯಪಟ್ಟರು.

ಭಾನುವಾರ ನಗರದ ನೆಮ್ಮದಿ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ೧೨ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಗಡಿ ಭಾಗದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ತಮಿಳು, ತೆಲುಗು, ಮರಾಠಿ ಭಾಷೆ ಪ್ರಭಾವ ಜಾಸ್ತಿಯಾಗಿದೆ. ಕನ್ನಡ ಉಳಿಸಿ ಬೆಳೆಸಲು ಶ್ರಮ ಪಡಬೇಕಿದೆ. ಹಿಂದಿ ಕಲಿಯುವುದು ಅನಿವಾರ್ಯ ಮತ್ತು ಅದರಲ್ಲಿ ತಪ್ಪೇನಿಲ್ಲ? ಆದರೆ, ಕನ್ನಡ ರಾಜ್ಯದಲ್ಲಿ ಪ್ರಧಾನವಾಗಬೇಕು. ನಮ್ಮ ಗ್ರಾಮ ಗ್ರಾಮಗಳಲ್ಲಿ ಕನ್ನಡ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಬಸವಣ್ಣನವರು ಹೊಸ ಸಮಾಜದ ಹಾದಿಯತ್ತ ಸಾಗಿದಾಗಲೂ ಲೋಕ ವಿರೋಧಗಳು ಬಂದಿದ್ದವು. ಆಗ ಅತ್ಯಂತ ಗಟ್ಟಿತನ, ಧೈರ್ಯದಿಂದ ಮುಂದೆ ಸಾಗಿದ ಅವರು, ಶರಣ ವಚನೋಕ್ತಿಗಳನ್ನು ಪ್ರಸ್ತುತಪಡಿಸಿದಾಗ ಆತ್ಮವಿಶ್ವಾಸದ ದಾರಿಗಳು ತೆರೆದುಕೊಂಡವು. ಬಸವಾದಿ ಶರಣರ ಅನೇಕ ವಿಚಾರಗಳು ಯುವಜನರ ಸುಂದರ ಬದುಕಿಗೆ ದಾರಿದೀಪಗಳಾಗಿವೆ. ಮಾನವ ಎಷ್ಟೇ ದಿನ ಬದುಕುಳಿಯಲಿ, ಏನೇ ಸಾಧಿಸಲಿ. ಆದರೆ ಸಾಧನೆಯೆಲ್ಲ ಒಳ್ಳೆಯತನದಿಂದ ಕೂಡಿರಬೇಕು. ನಾಡಿನಲ್ಲಿ ಹಲವಾರು ಮಠಗಳಿಂದ ಅನೇಕ ಸಾಧಕರ ಸರಣೀಕೃತ ಪುಸ್ತಕಗಳು ಹೊರಬಂದಿವೆ. ಇಂತಹ ಸಾಧನೆ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನಿಂದಲೂ ನಡೆಯಬೇಕಿದೆ. ಇದಕ್ಕೆ ಸಮಾಜ ಹಾಗೂ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದರು.ಹಿರಿಯ ಚಿಂತಕ ರಾಮದಾಸ ರಾಮ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಟಕಕಾರ ಹನುಮಂತ ಸಾಲಿ, ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರಸಾರಾಂಗ ನಿರ್ದೇಶಕ ಚೆನ್ನಬಸಪ್ಪ ಧಾರವಾಡಶೆಟ್ರು, ಮನೋಹರ ಮಲ್ಮನೆ, ಕೃಷ್ಣ ಪದಕಿ, ಜಿ.ಯು. ಹೊನ್ನಾವರ, ಡಾ. ಶಾಂತಣ್ಣ ಕಡಿದಾಳ, ರಾಮು ಕಿಣಿ, ಮಂಜುನಾಥ ಹೆಗಡೆ ಹುಡ್ಲಮನೆ ಮತ್ತಿತರರು ಉಪಸ್ಥಿತರಿದ್ದರು. ಭವ್ಯ ಹಳೆಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.