ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡಿಗರಿಗೆ ಉದ್ಯೋಗ ಮಸೂದೆಯನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಮಂಡಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಕೆಲ ಕಾಲ ರಸ್ತೆಯಲ್ಲೇ ಮಲಗಿ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಆದರೆ, ಖಾಸಗಿ ಉದ್ಯಮಿಗಳಿಂದ ಮಸೂದೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಸಂಪುಟದಲ್ಲಿ ತೀರ್ಮಾನಿಸಿದ ಕಾಯ್ದೆಯನ್ನು ಸದನದಲ್ಲೇ ಮಂಡಿಸಿ ವಿರೋಧ ಮಾಡುತ್ತಿರುವ ಕಾರ್ಪೋರೇಟ್ ವಲಯದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ವಿಧೇಯಕ ವಿಧಾನ ಮಂಡಲದ ಉಭಯ ಅವೇಶನಗಳಲ್ಲಿ ಅಂಗೀಕಾರವಾಗಬೇಕು. ಮೂರು ಪಕ್ಷದ ಜನಪ್ರತಿನಿಧಿಗಳು ಸರ್ವಾನುಮತದಿಂದ ಈ ವಿಧೇಯಕವನ್ನು ಅನುಮೋದಿಸಿ ಅಂಗೀಕರಿಸಬೇಕು. ಕನ್ನಡಿಗರಿಗೆ ಬಹುದಿನದ ಡಾ.ಸರೋಜಿನಿ ಮಹಿಷಿ ವರದಿಗಾಗಿ ರಾಜ್ಯಾದ್ಯಂತ ಕನ್ನಡ ಸಂಘಟನೆಗೆಳು ಹೋರಾಟ ಮಾಡಿಕೊಂಡು ಬಂದಿವೆ. ಈ ಮಧ್ಯೆ ಕೆಲ ಕಾರ್ಪೋರೇಟ್ ವಲಯದ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕಕ್ಕೆ ವಿರೋಧಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಜಾರಿಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಆಗ್ರಹಪಡಿಸಿದರು.ಕಾರ್ಪೋರೇಟ್ ಉದ್ಯಮಿಗಳ ತಾಳಕ್ಕೆ ಕುಣಿಯದೆ ಏಳು ಕೋಟಿ ಕನ್ನಡಿಗರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕಾಯಿದೆಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ. ಮಂಜುನಾಥ್, ಮುಖಂಡರಾದ ಅಶೋಕ್, ಪ್ರಸನ್ನ, ಇಂದುಮತಿ, ಮನೋಜ್, ಪ್ರತಿಮಾ, ಶೌರ್ಯ, ರಾಘವೇಂದ್ರ, ಕುಮಾರ, ಆತ್ಮಾನಂದ, ಮಧುಕುಮಾರ್ ಇತರರಿದ್ದರು.