ಕನ್ನಡ ಕುಗ್ಗಲು ಸರ್ವಭಾಷಾ ಸಹಿಷ್ಣುತೆಯೇ ಕಾರಣ: ಡಾ.ತಾತಾಸಾಹೇಬ ಬಾಂಗಿ

| Published : Jun 30 2024, 12:54 AM IST

ಕನ್ನಡ ಕುಗ್ಗಲು ಸರ್ವಭಾಷಾ ಸಹಿಷ್ಣುತೆಯೇ ಕಾರಣ: ಡಾ.ತಾತಾಸಾಹೇಬ ಬಾಂಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನೆಲ, ಭಾಷೆ ಕುಗ್ಗಲು ಕನ್ನಡಿಗರಲ್ಲಿರುವ ಸರ್ವಭಾಷಾ ಸಹಿಷ್ಣುತೆ, ಸಹೃದಯ ಅತಿಥೇಯ ಎಂದೆಲ್ಲ ಕರೆದುಕೊಂಡು ಒಣ ಹೆಮ್ಮೆ ಪಡುತ್ತಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಡಾ.ತಾತಾಸಾಹೇಬ ಬಾಂಗಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ನೆಲ, ಭಾಷೆ ಕುಗ್ಗಲು ಕನ್ನಡಿಗರಲ್ಲಿರುವ ಸರ್ವಭಾಷಾ ಸಹಿಷ್ಣುತೆ, ಸಹೃದಯ ಅತಿಥೇಯ ಎಂದೆಲ್ಲ ಕರೆದುಕೊಂಡು ಒಣ ಹೆಮ್ಮೆ ಪಡುತ್ತಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಡಾ.ತಾತಾಸಾಹೇಬ ಬಾಂಗಿ ಕಳವಳ ವ್ಯಕ್ತಪಡಿಸಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಎರಡು ದಿನಗಳವರೆಗೆ ಆಯೋಜಿಸಿರುವ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಯರ ರಾಜಕೀಯ, ಸಾಂಸ್ಕೃತಿಕ ದಾಳಿಯಿಂದ ಕನ್ನಡ ನಾಡಿನ ಉತ್ತರದ ಮೇರೆ ನರ್ಮದೆಯಿಂದ ಗೋದಾವರಿಯವರೆಗೆ, ಗೋದಾವರಿಯಿಂದ ಭೀಮೆವರೆಗೆ ಬಂತು. ವಿಜಯನಗರ ಸಾಮ್ರಾಜ್ಯದಲ್ಲಿ ಲಂಕೆವರೆಗೆ ವಿಸ್ತೀರ್ಣಗೊಂಡಿತ್ತು, ಕಾಲನ ದಾಳಿಗೆ ಸಿಲುಕಿ ದಕ್ಷಿಣದ ಸುತ್ತಲಿನ ತೆಲುಗು, ತಮಿಳು, ಕೇರಳಿಗರ ಒತ್ತಡದಿಂದಾಗಿ ಕಿರಿದಾಗುತ್ತಾ ಬಂದು ಕಾವೇರಿ ಜಲಾಶಯದವರೆಗೆ ಬಂದು ನಿಂತಿದೆ. ಕನ್ನಡ ನೆಲ ಕುಗ್ಗಲು ನಮ್ಮಲ್ಲಿರುವ ಸರ್ವಭಾಷಾ ಸಹಿಷ್ಣುತೆ, ಸಹೃದಯ ಅತಿಥೇಯವೇ ಕಾರಣ. ಕಳೆದುಕೊಂಡ ಆ ಪ್ರದೇಶದಲ್ಲಿ ಕನ್ನಡದ ಕಂಪು ಹರಡಲು ಕನ್ನಡಪ್ರೇಮಿಗಳು, ಸಾಹಿತಿಗಳು, ಹೋರಾಟಗಾರರು, ರಾಜಕೀಯ ನಾಯಕರು ಎಚ್ಚರಗೊಳ್ಳಬೇಕಿದೆ ಎಂದು ಹೇಳಿದರು.

ಮೂರು ದಶಕಗಳಿಂದ ಕನ್ನಡಕ್ಕೆ ಅನೇಕ ಸಮಸ್ಯೆಗಳು ಎದುರಾಗಿವೆ. ನೆರೆ ರಾಜ್ಯದಿಂದ ವಲಸೆ ಬರುವ ಜನರ ಭಾಷೆ, ಇಂಗ್ಲಿಷ್ ಭಾಷೆಯ ವ್ಯಾಮೋಹ, ಆಂಗ್ಲ ಮಾಧ್ಯಮದ ಶಿಕ್ಷಣ, ಪುಸ್ತಕಗಳನ್ನು ಕೊಂಡು ಓದುವ ಓದುಗರ ಕೊರತೆ ಮುಂತಾದ ಸಮಸ್ಯೆಗಳನ್ನು ಕನ್ನಡ ಭಾಷೆ ಎದುರಿಸುತ್ತಿದೆ. ನಾವೆಲ್ಲ ಕನ್ನಡ ಕಟ್ಟುವುದಕ್ಕಾಗಿ ಕೈಜೋಡಿಸಿದರೆ ಕೈ ಕಲ್ಪವೃಕ್ಷವಾಗುತ್ತದೆ. ನಾವು ನಿರಾಶಾವಾದಿಗಳಾಗಬಾರದು, ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಧೇಯಕ ಅಂಗೀಕರಿಸಿದೆ. ಇದಕ್ಕೆ ರಾಜ್ಯಪಾಲರು ಅನುಮತಿ ನೀಡಬೇಕಿದೆ. ಶೀಘ್ರ ಕಾನೂನು ಜಾರಿಯಾಗಬೇಕಾಗಿದೆ ಎಂದು ಹೇಳಿದರು.

ಹೊರರಾಜ್ಯದಿಂದ ಬಂದವರೆಲ್ಲ ತಮ್ಮ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಆದರೆ, ಕನ್ನಡಿಗರಾದ ನಾವು ಅವರ ಭಾಷೆ ಕಲಿತು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಮಹಾನಗರಗಳಲ್ಲಿ ಕನ್ನಡ ಅನಾಥವಾಗುತ್ತಿದೆ. ಹೀಗಾಗಬಾರರು, ಕನ್ನಡದಲ್ಲೇ ವ್ಯವಹರಿಸಬೇಕೆಂಬ ಕಾನೂನು ಸರಿಯಾಗಿ ಜಾರಿಯಾಗಬೇಕಾಗಿದೆ.

-ಡಾ.ತಾತಾಸಾಹೇಬ ಬಾಂಗಿ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರು