ಸಾರಾಂಶ
ಬಿ.ವಿ. ಶಿರೂರು, ರುಕ್ಮುಣಿಬಾಯಿ, ಡಾ. ಚಂದ್ರಪ್ಪಗೆ ಸುವರ್ಣ ಮಹೋತ್ಸವ ಪ್ರಶಸ್ತಿ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟ ಮಾಡಿದ್ದು, ಜಿಲ್ಲೆಯ ಅವಿರತ ಹೋರಾಟಗಾರ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗೂ ಪೇಪರ್ ಗುಂಡಪ್ಪ ಎಂದೇ ಖ್ಯಾತಿಯಾಗಿರುವ ಕನ್ನಡಪ್ರಭ ವರದಿಗಾರ ಎ.ಜಿ. ಕಾರಟಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಹಾಗೆ, ಜಿಲ್ಲೆಯ ರುಕ್ಮಿಣಿಬಾಯಿ, ಡಾ. ಚಂದ್ರಪ್ಪ ಹಾಗೂ ಬಿ.ವಿ. ಶಿರೂರು ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಅಲ್ಲಮಪ್ರಭು ಬೆಟ್ಟದೂರು:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದವರು. ಕೊಪ್ಪಳ ನಗರದ ಕಲ್ಯಾಣ ನಗರದಲ್ಲಿಯೇ ವಾಸವಾಗಿದ್ದಾರೆ.
1951, ಜುಲೈ 30ರಂದು ಜನಿಸಿರುವ ಇವರು, ಧಾರವಾಡ ವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಇದು ನನ್ನ ಭಾರತ, ಕುದರಿಮೋತಿ ಮತ್ತು ನೀಲಗಿರಿ, ಕೆಡವ ಬಲ್ಲರು ಅವರು, ಕಟ್ಟಬಲ್ಲರು ನಾವು, ಗುಲಗಂಜಿ ಅವರ ಪ್ರಕಟಿತ ಕೃತಿಗಳು, ವರ್ತಮಾನ, ಸಹಜ ವಿಮರ್ಶೆ, ಸುತ್ತಮುತ್ತ ಅವರ ಅಂಕಣ ಮತ್ತು ಗದ್ಯ ಬರಹಗಳು. ಇದಲ್ಲದೆ ತಿರುಳ್ಗನ್ನಡ, ಅಂಬಿಗರ ಚೌಡಯ್ಯ ಸೇರಿದಂತೆ ಅನೇಕ ಸಂಪಾದಿತ ಕೃತಿಗಳು ಇವೆ. ಪಠ್ಯದಲ್ಲಿಯೂ ಇವರ ಸಾಹಿತ್ಯವಿದೆ.
ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿಯಾಗಿ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅವಿರತ ಹೋರಾಟ:
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸಾಹಿತ್ಯ ರಚನೆಗಿಂತಲೂ ಹೋರಾಟದಿಂದಲೇ ಗುರುತಿಸಿಕೊಂಡಿದ್ದಾರೆ, ಜಿಲ್ಲಾ ಮಟ್ಟದ ಹೋರಾಟದಿಂದ ಹಿಡಿದು ರಾಜ್ಯಮಟ್ಟದ ಹೋರಾಟದಲ್ಲಿ ಅವರು ಹೆಸರು ಮುಂಚೂಣಿಯಲ್ಲಿ ಸದಾ ಇರುತ್ತದೆ.ಜೆಪಿ ಅವರ ನವನಿರ್ಮಾಣ ಚಳವಳಿ, ಗೋಕಾಕ ಚಳವಳಿ, ಕುದರಿಮೋತಿ ಹೋರಾಟ. ಕೊಪ್ಪಳ ಜಿಲ್ಲಾ ಹೋರಾಟ, ಕೋಮು ಸೌರ್ಹಾದ ಹೋರಾಟ ಸೇರಿದಂತೆ ಸಾಲು ಸಾಲು ಹೋರಾಟಗಳಲ್ಲಿ ಅವರ ಸೇವೆ ಅನನ್ಯ. ಹೋರಾಟದಲ್ಲಿಯೇ ಅವರ ಜೀವನ ಎನ್ನುವಂತೆ ಇರುತ್ತದೆ.
ಪೇಪರ್ ಗುಂಡಪ್ಪಗೆ ರಾಜ್ಯೋತ್ಸವ ಗರಿ:ಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿಐದು ದಶಕಗಳಿಗೂ ಹೆಚ್ಚು ಕಾಲ ''''ಕನ್ನಡಪ್ರಭ''''ದ ಏಜಂಟರಾಗಿ, ವರದಿಗಾರರಾಗಿ ಸೇವೆ ಸಲ್ಲಿಸಿರುವ ಎ.ಜಿ. ಕಾರಟಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕನಕಗಿರಿ ಕ್ಷೇತ್ರ ವ್ಯಾಪ್ತಿಯ ಕಾರಟಗಿ ನಗರ ನಿವಾಸಿಯಾಗಿರುವ ಎ.ಜಿ. ಕಾರಟಗಿ (ಅಮರ ಗುಂಡಪ್ಪ) ಓದಿದ್ದು 7ನೇ ತರಗತಿ, ದಿನ ನಿತ್ಯ ಸೈಕಲ್ ಮೇಲೆಯೇ ಪ್ರಯಾಣಿಸಿ ಹಳ್ಳಿಗಳಿಗೆ ಪತ್ರಿಕೆ ವಿತರಿಸುವ ಕೆಲಸ ಮಾಡಿದ್ದಾರೆ.ಹಳ್ಳಿ, ನಗರದಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದ್ದ ಇವರು ‘ಪೇಪರ್ ಗುಂಡಪ್ಪ’ ಎಂಬ ಅನ್ವರ್ಥಕ ನಾಮದಿಂದ ಗುರುತಿಸಿಕೊಂಡಿರುವುದು ಗಮನಾರ್ಹ. ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಡಿವಿಜಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೧೯೪೭ರಲ್ಲಿ ಹೈದರಾಬಾದ್ ನಿಜಾಮರ ವಿರುದ್ಧ ಗ್ರಾಮ ಸೇನೆ ಕಟ್ಟಿಕೊಂಡು ಹೋರಾಡುವಾಗ ಗುಂಡಿನ ಏಟು ತಿಂದಿದ್ದಾರೆ. 80ರ ಇಳಿ ವಯಸ್ಸಿನಲ್ಲಿ ಇಂದಿಗೂ ಗಲ್ಲಿ-ಗಲ್ಲಿಯಲ್ಲೂ ಕನ್ನಡಪ್ರಭ ವಿತರಿಸುತ್ತಾರೆ.